ಗುಂಡ್ಲುಪೇಟೆ | ಚಾಕುವಿನಿಂದ ಇರಿದು ಯುವಕನ ಹತ್ಯೆ: ಆರೋಪಿಯ ಬಂಧನ
ಸಂಜಯ್ - ಮೃತ ಯುವಕ
ಚಾಮರಾಜನಗರ: ಚಾಕುವಿನಿಂದ ಇರಿದು ಯುವಕನೋರ್ವನನ್ನು ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಅರಳಿಕಟ್ಟೆ ಬೀದಿಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ನಾಯಕ ಬೀದಿಯ ಸಂಜಯ್ (24) ಹತ್ಯೆಯಾಗಿದ್ದು, ಅಭಿ ಎಂಬ ಆರೋಪಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಸೋಮವಾರ ತಡ ರಾತ್ರಿಯ ವೇಳೆಯಲ್ಲಿ ಅಭಿ ಮತ್ತು ಸಂಜಯ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಅಭಿ ಚಾಕುವಿನಿಂದ ಸಂಜಯ್ ನನ್ನು ಮನಸೋ ಇಚ್ಚೆಯಂತೆ ಇರಿದು ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಘಟನೆ ನಡೆಯುತ್ತಿದಂತೆ ಮಾಹಿತಿ ಪಡೆದ ಗುಂಡ್ಲುಪೇಟೆ ಪೊಲೀಸರು ಆರೋಪಿ ಅಭಿಯನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಡಿವೈಎಸ್ ಪಿ ಪ್ರಿಯದರ್ಶಿನಿಸಾಣೆಕೊಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತದೇಹವನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿರಿಸಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತ್ತಿತ್ತು. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.