--

ರಾಜ್ಯದಲ್ಲಿ ಶಾಂತಿ- ಸೌಹಾರ್ದತೆ ತುರ್ತಾಗಿ ಮರುಸ್ಥಾಪಿಸುವಂತೆ ಆಗ್ರಹಿಸಿ 76 ಗಣ್ಯರಿಂದ ಸಿಎಂಗೆ ಬಹಿರಂಗ ಪತ್ರ

ಬೆಂಗಳೂರು, ಜೂ. 24: ‘ರಾಜ್ಯವು ಶಾಂತಿ, ಸಹಬಾಳ್ವೆ, ವೈವಿಧ್ಯತೆ, ಬಹುತ್ವಕ್ಕೆ ಹೆಸರಾಗಿದ್ದು, ಈ ನಾಡಿನಲ್ಲಿ ಇವುಗಳನ್ನೆಲ್ಲ ನಾಶಗೊಳಿಸುವಂತಹ ಬೆಳವಣಿಗೆಗಳನ್ನು ನೋಡಿ ವ್ಯಾಕುಲಗೊಂಡಿದ್ದೇವೆ. ಹೀಗಾಗಿ ನಿರ್ದಿಷ್ಟ ಕೋಮಿನ ಜನರನ್ನು ನಿಂದಿಸಿ ಅಮಾನವೀಕರಣಗೊಳಿಸುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ದೈಹಿಕ ಹಿಂಸೆಗೆ ಪ್ರಚೋದನೆ ನೀಡುವ ಪ್ರವೃತ್ತಿಗೆ ತಡೆಯೊಡ್ಡಿ ಅಲ್ಪಸಂಖ್ಯಾತರ ವಿರುದ್ಧ ಸಾಮಾಜಿಕ-ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳುಗೆಡುವುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು' ಎಂದು ಆಗ್ರಹಿಸಿ ಸಾಹಿತಿ, ಕಲಾವಿದರು, ನಿವೃತ್ತ ನಾಗರಿಕ ಸೇವಕರು ಹಾಗೂ ಚಿಂತಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಶುಕ್ರವಾರ ಮೂರು ಪುಟಗಳ ಸುದೀರ್ಘ ಪತ್ರವನ್ನು ಬರೆದಿರುವ ಲೇಖಕಿಯರಾದ ವೈದೇಹಿ, ವಿಜಯಮ್ಮ, ಶಶಿ ದೇಶಪಾಂಡೆ, ಚಿತ್ರನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಎಂ.ಎಸ್.ಸತ್ಯು, ಬಿ.ಸುರೇಶ್, ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ನಿವೃತ್ತ ಅಧಿಕಾರಿಗಳಾದ ಅಜಯ್ ಕುಮಾರ್ ಸಿಂಗ್, ಚಿರಂಜೀವಿ ಸಿಂಗ್, ರಘುನಂದನ್, ಪಾಸ್ಕಲ್ ನಜರೆತ್, ಇತಿಹಾಸ ತಜ್ಞ ಡಾ.ರಾಮಚಂದ್ರ ಗುಹಾ, ಗಾಯಕಿ ಎಂ.ಡಿ.ಪಲ್ಲವಿ, ಪರಿಸರ ತಜ್ಞ ಯಲ್ಲಪ್ಪರೆಡ್ಡಿ, ಕಲಾವಿದ ಎಸ್.ಜಿ.ವಾಸುದೇವ್, ವಿಜ್ಞಾನಿ ಶರಶ್ಚಂದ್ರ ಲೆಲೆ, ಪತ್ರಕತ್ರ ನಾಗೇಶ್ ಹೆಗಡೆ, ಕೋಟಿಗಾನಹಳ್ಳಿ ರಾಮಯ್ಯ, ಡಾ.ಸಬಿಹಾ ಭೂಮಿಗೌಡ ಸೇರಿದಂತೆ 75ಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದಾರೆ.

‘ರಾಜ್ಯ ಪೊಲೀಸ್ ಪಡೆಯು ತನ್ನ ಸಾಂವಿಧಾನಿಕ ಕರ್ತವ್ಯಕ್ಕೆ ಬದ್ಧವಾಗಿ ಕಾನೂನು ಪಾಲನೆ ಎತ್ತಿಹಿಡಿದು ಸಮಾಜದ ದುರ್ಬಲವರ್ಗದ ನಾಗರಿಕರ ರಕ್ಷಣೆ ಮಾಡುವಂತೆ ನಿರ್ದೇಶನ ನೀಡಬೇಕು. ಮತೀಯವಾದಿ ಮತ್ತು ಜಾತಿವಾದಿ ಅಪರಾಧಗಳಿಗೆ ತುತ್ತಾಗುವ ನಾಗರಿಕರಿಗೆ ಪೂರ್ಣ ನ್ಯಾಯ ದೊರಕುವಂತೆಯೂ, ಇಂತಹ ಅಪರಾಧಗಳನ್ನು ಎಸಗುವವರ ವಿರುದ್ಧ ಸಾಕ್ಷಿದಾರರು ಧೈರ್ಯದಿಂದ ಮುಂದೆ ಬಂದು ಮುಕ್ತವಾಗಿ ತಮ್ಮ ಸಾಕ್ಷ್ಯವನ್ನು ನೀಡುವಂತೆಯೂ, ಅವರಿಗೆಲ್ಲಾ ಪೂರ್ಣ ರಕ್ಷಣೆ ಒದಗಿಸಿ ಅವರಲ್ಲಿ ವಿಶ್ವಾಸ ತುಂಬಿಸಬೇಕು' ಎಂದು ಆಗ್ರಹಿಸಿದ್ದಾರೆ.

‘ಕೋಮುವಾದಿ ಗಲಭೆಗಳಿಂದಾಗಿ ಹಿಂಸೆ, ಸಾವು ಹಾಗೂ ಬದುಕು ನಷ್ಟವಾದಾಗ, ಸ್ಥಳೀಯ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಜವಾಬ್ದಾರರಾದ ಅಧಿಕಾರಿಗಳ ವಿರುದ್ಧ, ವಿಶೇಷವಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಸುಳ್ಳು ಸುದ್ದಿಗಳು ಮತ್ತು ಗಾಳಿ ಸಮಾಚಾರಗಳನ್ನು ಹಬ್ಬಿಸುವ ಕೃತ್ಯ ನಡೆಯುತ್ತಿದೆ. ಇದರಿಂದ ಈ ಸಮುದಾಯಗಳನ್ನು ಅನ್ಯವಾಗಿಸುವ ಮತ್ತು ಅವರನ್ನು ಹಿಂಸೆಗೆ ಒಳಪಡಿಸುವ ಅಪಾಯ ಹೆಚ್ಚಾಗುತ್ತಿದೆ. ಇಂತಹ ಅಪರಾಧಗಳ ವಿರುದ್ಧ ಸರಕಾರ ಬಹಿರಂಗವಾಗಿ ದನಿಯೆತ್ತಿ ಮಾತನಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಕೋರಿದ್ದಾರೆ.

‘ನೀತಿಯುತ ಪತ್ರಿಕೋದ್ಯಮದ ತತ್ವಬದ್ಧ ಮೌಲ್ಯಗಳನ್ನು ಉಲ್ಲಂಘಿಸಿ ಸುಳ್ಳು ಮಾಹಿತಿಯ ಸುದ್ದಿ ಬಿತ್ತರಿಸುತ್ತಾ ಸಮಾಜದಲ್ಲಿ ಅಸಹಿಷ್ಣುತೆ, ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುತ್ತಿರುವ ಮಾಧ್ಯಮಗಳಲ್ಲಿನ ಹಲವರಿಗೆ ಅಂತಹ ಕರ್ತವ್ಯಲೋಪಗಳನ್ನು ನಿಗ್ರಹಿಸುವಂತೆ ಒತ್ತಾಯಿಸಬೇಕು. ರಾಜ್ಯದಲ್ಲಿನ ಸೌಹಾರ್ದಯುತ ವಾತಾವರಣವನ್ನು ನಿರ್ಭೀತರಾಗಿ ಹಾಳುಗೆಡವುತ್ತಿರುವುದು ಒಪ್ಪಿತವಲ್ಲವೆಂಬುದನ್ನು ಮನದಟ್ಟು ಮಾಡಬೇಕು' ಎಂದು ಮನವಿ ಮಾಡಲಾಗಿದೆ.

‘ಸರಕಾರವು ಸಕ್ರಿಯ ಕ್ರಮಗಳನ್ನು ಕೈಗೊಂಡರೆ ಹಿಂಸೆಯಲ್ಲಿ ತೊಡಗಿರುವ ಹಾಗೂ ಹಿಂಸೆಗೆ ಪ್ರಚೋದನೆ ನೀಡುತ್ತಿರುವರಿಗೆ ಹಾಗೂ ನಾಗರಿಕರಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ ಮೂಡಿಸುತ್ತಿರುವವರಿಗೆ ಇಂತಹ ಕಾನೂನು ಬಾಹಿರ ಹಾಗೂ ಒಪ್ಪಿತವಲ್ಲದ ವರ್ತನೆಗಳನ್ನು ಹಾಗೂ ದ್ವೇಷಪೂರಿತ ಅಪರಾಧಗಳನ್ನು ಸರಕಾರ ಸಹಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ಸಾರಿದಂತಾಗುವುದು, ರಾಜ್ಯವು ಇಂತಹ ಸಂಕ್ರಮಣ ಸ್ಥಿತಿಯಲ್ಲಿರುವಾಗ ಮತೀಯ ಸೌಹಾರ್ದತೆಯನ್ನು ಮರುಪ್ರತಿಷ್ಠಾಪಿಸುವುದು ಪ್ರಾಮುಖ್ಯವಾದ ಮತ್ತು ಅತ್ಯಂತ ತುರ್ತಿನ ಕಾರ್ಯವೆಂದು ನಾವು ಪರಿಭಾವಿಸಿದ್ದೇವೆ.

ಈ ನಿಟ್ಟಿನಲ್ಲಿ ತಮ್ಮ ನೇತೃತ್ವದ ಸರಕಾರವು ಮುನ್ನಡಿ ಇಡಬೇಕೆಂದು ಬಯಸುತ್ತೇವೆ. ಈ ಸಂದರ್ಭದಲ್ಲಿ ರಾಜ್ಯವು ಪ್ರಗತಿಯೆಡೆಗೆ ಸಾಗುವ ಬದಲಾಗಿ ಸರಕಾರದ ನಿಷ್ಕ್ರಿಯತೆಯಿಂದಾಗಿ ತಳಮಟ್ಟಕ್ಕಿಳಿಯಿತು ಎನ್ನುವ ಅಪಖ್ಯಾತಿಗೆ ತಾವು ಒಳಗಾಗಬಾರದು ಎನ್ನುವ ಆಶಯ ನಮ್ಮದು, ಈ ನಿಟ್ಟಿನಲ್ಲಿ ಸರಕಾರದ ಪ್ರಬಲ, ಸ್ಪಷ್ಟ ಅಧಿಕೃತ ಆದೇಶ ಕ್ರಮಗಳನ್ನು ನಾವು ನಿಮ್ಮಿಂದ ನಿರೀಕ್ಷಿಸುತ್ತಿದ್ದೇವೆ' ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಕೋಮು ಸೌಹಾರ್ದತೆಯ ವಿಷಯದಲ್ಲಿ ರಾಜ್ಯಕ್ಕೆ ಭವ್ಯ ಪರಂಪರೆಯಿದೆ. 1956ರಲ್ಲಿ ಏಕೀಕರಣವಾಯಿತು, ಆದರೆ, ರಾಜ್ಯದ ಮತೀಯ ಸೌಹಾರ್ದತೆ ಇತಿಹಾಸ ಇದಕ್ಕಿಂತಲೂ ಹಳೆಯದು. 12ನೆ ಶತಮಾನದಲ್ಲಿಯೆ ದಾರ್ಶನಿಕ ಬಸವಣ್ಣನವರ ಪ್ರಯತ್ನಗಳಿಂದಾಗಿ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣೆಯಲ್ಲಿ ಕನ್ನಡ ನಾಡು ಸೌಹಾರ್ದತೆಯ ಇತಿಹಾಸವನ್ನೇ ನಿರ್ಮಿಸಿದೆ. ಸಮ್ಮಿಶ್ರ ಸಂಪ್ರದಾಯಗಳಿಗೆ, ಹಿಂದು ಮುಸ್ಲಿಂರನ್ನು ಒಳಗೊಂಡಂತೆ, ಜನಸಮುದಾಯಗಳ ನಡುವೆ ಶಾಂತಿಯುತ ಸಹಬಾಳ್ವೆಗೆ ನಾಡಿನ ಇತಿಹಾಸ ಸಾಕ್ಷಿ. ಈ ಭವ್ಯ ಪರಂಪರೆಯ ಹಿನ್ನೆಲೆಯಲ್ಲೇ ರಾಷ್ಟ್ರಕವಿ ಕುವೆಂಪುರವರು ನೂರು ವರ್ಷಗಳಷ್ಟು ಹಿಂದೆಯೇ ಈ ನಾಡನ್ನು ‘ಸರ್ವ ಜನಾಂಗದ ಶಾಂತಿಯ ತೋಟ' ಎಂದು ಬಣ್ಣಿಸಿದ್ದಾರೆ.

ಕರ್ನಾಟಕದ ಈ ಮುಕ್ತ ಮನಸ್ಸಿನ ನಡಾವಳಿ, ಸಂಸ್ಕೃತಿಯೇ ಈ ಕಾಲಘಟ್ಟದಲ್ಲಿ ಸೃಜನಶೀಲ ಮತ್ತು ಹೊಸತನ್ನರಸುವ ವ್ಯಕ್ತಿಗಳನ್ನು ರಾಷ್ಟ್ರದ ಎಲ್ಲೆಡೆಯಿಂದ ಸೂಜಿಗಲ್ಲಿನಂತೆ ಆಕರ್ಷಿಸಿದೆ. ಭಾರತದ ವಿವಿಧ ಪ್ರಾಂತ್ಯಗಳಿಗೆ ಸೇರಿದ ವಿಭಿನ್ನ ಜನಸಮುದಾಯಗಳ ಜನರು ಕರ್ನಾಟಕಕ್ಕೆ ಅಪಾರ ಸಂಖ್ಯೆಯಲ್ಲಿ ವಲಸೆ ಬಂದು ಇಲ್ಲಿ ನೆಲೆಸಿ ನಮ್ಮ ರಾಜ್ಯದ ಸಮೃದ್ಧ ವೈವಿಧ್ಯಮಯ ಸಂಸ್ಕೃತಿಯನ್ನು ಮೆಚ್ಚಿ ತಮ್ಮ ಬದುಕಿನಲ್ಲೂ ಅವುಗಳನ್ನು ಅಳವಡಿಸಿಕೊಂಡಿದ್ದಾರೆ. ತನ್ಮೂಲಕ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ರಕ್ಷಣೆ, ಉದ್ಯಮಶೀಲತೆ, ಸಾಹಿತ್ಯ, ಕಲೆ, ಸಾಮಾಜಿಕ, ಸಾಂಸ್ಕೃತಿಕ ಮತ್ತಿತರ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಚೈತನ್ಯಶೀಲ ರಾಜ್ಯವನ್ನಾಗಿ ರೂಪಿಸಿದ್ದಾರೆ. ಇಂಥ ಉಜ್ವಲ ಹಿನ್ನೆಲೆಯ ನಾಡಿನಲ್ಲಿ ಇತ್ತೀಚಿಗೆ ಮುಸ್ಲಿಂ, ಕ್ರೈಸ್ತ ಮತ್ತು ದಲಿತ ಸಮುದಾಯಗಳ ಮೇಲೆ ನಾನಾ ರೀತಿಯಲ್ಲಿ ಹಲ್ಲೆಗಳು ನಡೆಯುತ್ತಿವೆ. ಸರ್ವರನ್ನೂ ಒಳಗೊಳ್ಳುವ, ಒಪ್ಪಿ ಅಪ್ಪಿಕೊಳ್ಳುವ ಗುಣಲಕ್ಷಣದ ಕರ್ನಾಟಕ ರಾಜ್ಯದ ಬಗ್ಗೆ ಹೆಮ್ಮೆ, ಅಭಿಮಾನ ಹೊಂದಿರುವ ಜನರಲ್ಲಿ ಈ ಘಟನೆಗಳು ಆಘಾತ ಮೂಡಿಸಿವೆ.

‘ಬಸವ ಜಯಂತಿ' ಸಂದರ್ಭದಲ್ಲಿ ಬಸವಣ್ಣನವರ ಕನಸಿನ ಸಮಾನತೆಯ ಸೌಹಾರ್ದಯುತ ಸಮಾಜವನ್ನು ಕಟ್ಟುವುದು ನಮ್ಮ ಗುರಿ ಎಂದು ಸರಕಾರದ ಜಾಹೀರಾತಿನಲ್ಲಿ ಪ್ರಕಟಿಸಲಾಗಿದೆ, ಸಾಮಾಜಿಕ ಸೌಹಾರ್ದತೆ, ಬ್ರಾತೃತ್ವ, ಏಕತೆ ಮತ್ತು ಅಂತಃಕರಣಕ್ಕೆ ಬಸವಣ್ಣನವರು ಒತ್ತು ನೀಡಿದ್ದರು ಎನ್ನುವ ನಮ್ಮ ಪ್ರಧಾನ ಮಂತ್ರಿಯವರ ಮಾತುಗಳನ್ನು ಇದರ ಜೊತೆ ಉದ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಸರಕಾರವು ಪವಿತ್ರ ಈದ್ ಉಲ್ ಫಿತರ್ ಹಬ್ಬವನ್ನು ಬಸವ ಜಯಂತಿಯಂತೆಯೇ ಅಚರಿಸಿ ಸತತವಾಗಿ ಕೋಮು ದ್ವೇಷಿಗಳ ದಾಳಿಗೆ ತುತ್ತಾಗುತ್ತಿರುವ ಮುಸ್ಲಿಂ ನಾಗರಿಕರನ್ನು ಉದ್ದೇಶಿಸಿ ಅವರ ರಕ್ಷಣೆ ಮತ್ತು ಸುರಕ್ಷತೆ ಮಾಡುತ್ತೇವೆಂದು ಆಶ್ವಾಸನೆ ನೀಡಿದ್ದರೆ ಅದು ಮತ್ತಷ್ಟು ಹೃದಯಸ್ಪರ್ಶಿಯಾಗುತ್ತಿತ್ತು. ಶಾಂತಿ ಸೌಹಾರ್ದತೆ ಮತ್ತು ನ್ಯಾಯದಾನ ನೀಡುವ ಹೊಣೆಗಾರಿಕೆಯನ್ನು ಸರಕಾರವು ನಿರ್ವಹಿಸುತ್ತದೆ ಎನ್ನುವ ನಂಬಿಕೆಯಿಂದ ನಾವು ಎಲ್ಲ ನಾಗರಿಕರ ಸೌಖ್ಯ ಮತ್ತು ವಿಶ್ವಾಸವನ್ನು ಪುನರ್ ಪ್ರತಿಷ್ಠಾಪಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ' ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಒಂದು ತಿಂಗಳಿಂದ ತಮ್ಮನ್ನು ಭೇಟಿ ಮಾಡಿ ಈ ಕೆಳಕಂಡ ಪತ್ರವನ್ನು ಸಲ್ಲಿಸಲು ತಮ್ಮ ಕಚೇರಿಯ ಮೂಲಕ ಪ್ರಯತ್ನಿಸಿದ್ದೇವೆ. ನಮ್ಮ ಪ್ರಯತ್ನಗಳು ವಿಫಲವಾಗಿರುವುದರಿಂದ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಕೂಡಿರುವ ಈ ಪತ್ರವನ್ನು ಬಹಿರಂಗ ಪತ್ರವನ್ನಾಗಿ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಕಾಳಜಿಗಳನ್ನೂ ಸಲಹೆಗಳನ್ನೂ ತಮ್ಮ ಗಮನಕ್ಕೆ ತರುವುದು ನಾಗರಿಕರಾಗಿ ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ. ತಾವು ಹಾಗೂ ತಮ್ಮ ಸರಕಾರವು ಈ ಪತ್ರವನ್ನು ಗಂಭೀರವಾಗಿ ಪರಿಗಣಿಸುವಿರೆಂದು ನಂಬಿದ್ದೇವೆ'


ಪತ್ರಕ್ಕೆ ಸಹಿ ಹಾಕಿದ ಗಣ್ಯರು

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top