ರಾಜಸ್ಥಾನದಲ್ಲಿ ಟೈಲರ್ ಶಿರಚ್ಛೇದ ಘಟನೆ ಖಂಡನೀಯ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಜೂ.29: ರಾಜಸ್ಥಾನದಲ್ಲಿ ಮುಗ್ಧ ಟೈಲರ್ ಶಿರಚ್ಛೇದ ಮಾಡಿರುವ ಘಟನೆ ನನಗೆ ತೀವ್ರ ಘಾಸಿ ಉಂಟು ಮಾಡಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪೈಶಾಚಿಕ ಕೃತ್ಯ. ಹಿಂಸೆ ಯಾವುದಕ್ಕೂ ಉತ್ತರವಲ್ಲ, ಪರಿಹಾರವೂ ಅಲ್ಲ. ಯಾವ ಧರ್ಮವೂ ಹಿಂಸೆಯನ್ನು ಒಪ್ಪುವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ಗಳನ್ನು ಮಾಡಿರುವ ಅವರು, ಕನ್ಹಯ್ಯಾ ಲಾಲ್ ಅವರ ಹತ್ಯೆಯನ್ನು ಪಕ್ಷಾತೀತವಾಗಿ ಖಂಡಿಸಲೇಬೇಕು. ಆ ಪಾತಕಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಬೇಕು. ಮತ್ತೊಮ್ಮೆ ಇಂಥ ಘಟನೆಗಳು ಮರುಕಳಿಸಲೇಬಾರದು. ರಕ್ಕಸರಷ್ಟೇ ಇಂಥ ಕೃತ್ಯ ಎಸಗಲು ಸಾಧ್ಯ. ಕಾನೂನು-ಕಾಯ್ದೆ ಎನ್ನುವುದಕ್ಕಿಂತ ಮನಃಪರಿವರ್ತನೆಯಿಂದಲೇ ಇಂಥ ಸ್ಥಿತಿಯಿಂದ ಎಲ್ಲರೂ ಹೊರಬೇಕಿದೆ ಎಂದು ಹೇಳಿದ್ದಾರೆ.
ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಿದೆ? ಕೊಲೆ, ಕೋಮುವಾದ, ಅಸಹಿಷ್ಣುತೆ, ದ್ವೇಷದಿಂದ ಧರ್ಮಗಳು ಉಳಿಯುವುದಿಲ್ಲ. ಮಾನವೀಯತೆ ಸತ್ತರಷ್ಟೇ ಕೋಮುವಾದ ವಿಜೃಂಭಿಸುತ್ತದೆ. ದರ್ಪ ಹೆಚ್ಚಿದಷ್ಟೂ ಧರ್ಮಗಳೂ ಅಳಿಯುತ್ತವೆ. ಕನ್ಹಯ್ಯಾ ಕೊಲೆ ಇಂಥ ದರ್ಪವನ್ನು ನಾಮಾವಶೇಷ ಮಾಡಲಿ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಕನ್ಹಯ್ಯಾ ಅವರಿಗಾಗಿ ಇಡೀ ಭಾರತ ಕಣ್ಣೀರಿಡುತ್ತಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ. ಕನ್ಹಯ್ಯಾ ಅವರ ಸಾವು, ಕೊಂದು ವಿಜೃಂಭಿಸುವ ಕಿರಾರತಕ ಮನಃಸ್ಥಿತಿಯನ್ನು ಬದಲಿಸಲಿ ಎಂದು ಅವರು ಹೇಳಿದ್ದಾರೆ.