ಕುರುಬರಹಳ್ಳಿಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸರ್ಕಾರಿ ಶಾಲೆ: ಸಚಿವ ಕೆ.ಗೋಪಾಲಯ್ಯ
ಬೆಂಗಳೂರು: ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುರುಬರಹಳ್ಳಿಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ದೆಹಲಿ ಮಾದರಿಯ ಸರ್ಕಾರಿ ಪಬ್ಲಿಕ್ ಶಾಲೆ ನಿರ್ಮಾಣವಾಗಲಿದೆ ಎಂದು ಸ್ಥಳೀಯ ಶಾಸಕ, ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುರುಬರಹಳ್ಳಿಯ ದೊಡ್ಡಮ್ಮ ದೇವಿ ದೇವಸ್ಥಾನದ ಸಮೀಪ ಕೆಂಪೇಗೌಡ ಉದ್ಯಾನವನದ ಆಧುನೀಕರಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ, ಅವರು ಮಾತನಾಡಿದರು.
ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರ ವ್ಯಾಪ್ತಿಯ ಕುರುಬರಹಳ್ಳಿಯ ಮಧ್ಯಮ ಮತ್ತು ಬಡ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ದೂರದೃಷ್ಟಿಯಿಂದ ಎಲ್ಲ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಕುರುಬರಹಳ್ಳಿಯಲ್ಲಿ ಈಗಾಗಲೇ 5 ಕೋಟಿ ವೆಚ್ಚದಲ್ಲಿ ಸರ್ಕಾರಿ ಶಾಲೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಹೆಚ್ಚುವರಿಯಾಗಿ ಇನ್ನೂ 2 ಕೋಟಿ ವೆಚ್ಚವಾದರೂ ಕೂಡ ಶಾಲೆಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗುವುದು ಎಂದರು.
ಎಲ್ಲರ ಸಲಹೆಯಂತೆ ಇದೀಗ ಕೆಂಪೇಗೌಡ ಉದ್ಯಾನವನವನ್ನು ಜನಸ್ನೇಹಿಯಾಗಿ ನಿರ್ಮಾಣ ಮಾಡಲಾಗುತ್ತಿದೆ. ಹಿರಿಯರು, ಆರೋಗ್ಯ ಸಮಸ್ಯೆ ಇರುವವರು ವಿಶ್ರಾಂತಿ ಪಡೆಯಲು ಮತ್ತು ಉತ್ತಮ ಗಾಳಿ ಸೇವನೆಗಾಗಿ ಉದ್ಯಾನವನವನ್ನು ಶೀಘ್ರವೇ ಸುಂದರವಾಗಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಬಿಜೆಪಿ ಘಟಕದ ಉಪಾಧ್ಯಕ್ಷ ಜಯರಾಮಯ್ಯ, ಪಕ್ಷದ ಮುಖಂಡರಾದ ಶ್ರೀನಿವಾಸ್ ಜಯಸಿಂಹ ಮೂರ್ತಿ, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ವಾರ್ಡ್ ಅಧ್ಯಕ್ಷ ಮಂಜುನಾಥ್ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.