ಬಕ್ರೀದ್ ಹಿನ್ನೆಲೆ: ಮಾರ್ಗಸೂಚಿಗಳನ್ನು ಪಾಲಿಸುವಂತೆ ರಾಜ್ಯ ಸರಕಾರ ಸುತ್ತೋಲೆ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಕ್ರೀದ್ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ ಪ್ರಾರ್ಥನೆ ಸಲ್ಲಿಸುವುದು ಹಾಗೂ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಾರ್ವತ್ರಿಕ ಅಧಿನಿಯ-2020'ರ ನಿಯಮಗಳು ಉಲ್ಲಂಘನೆಯಾಗದಂತೆ ‘ಕುರ್ಬಾನಿ'ಯನ್ನು ನೆರವೇರಿಸುವುದು ಎಂದು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.
ಬಕ್ರೀದ್ (ಈದುಲ್ -ಆಝ್ ಹಾ) ಹಬ್ಬವನ್ನು ಜು.10ರ ರವಿವಾರದಂದು ರಾಜ್ಯಾದ್ಯಂತ ಆಚರಿಸಲಾಗುವುದೆಂದು ರಾಜ್ಯ ಚಂದ್ರದರ್ಶನ ಸಮಿತಿ ಘೋಷಿಸಿದೆ. ದಿನದ ಸಾಮೂಹಿಕ ಪ್ರಾರ್ಥನೆಯಲ್ಲಿ ಕೋವಿಡ್-19 ನಿಯಂತ್ರಣ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ. ಕುರ್ಬಾನಿಯನ್ನು ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ-ಕಾಲೇಜು, ಆಸ್ಪತ್ರೆ ಆವರಣ, ಉದ್ಯಾನವನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲಾಗಿದೆ.
ಜಿಲ್ಲಾಡಳಿತ, ಸ್ಥಳೀಯ ಆಡಳಿತ ಸಂಸ್ಥೆಗಳಿಂದ ನಿಗದಿಪಡಿಸಲಾದ ಸ್ಥಳಗಳಲ್ಲಿ ಮಾತ್ರ ಕುರ್ಬಾನಿ ನೆರವೇರಿಸತಕ್ಕದ್ದು. ಕುರ್ಬಾನಿ ನೆರವೇರಿಸುವಾಗ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವುದು. ಪ್ರಾಣಿ ತ್ಯಾಜ್ಯವನ್ನು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಹಬ್ಬದ ಆಚರಣೆ ಕುರಿತು ರಾಜ್ಯ ಸರಕಾರ, ಜಿಲ್ಲಾಡಳಿತ ಹೊರಡಿಸುವ ಮಾರ್ಗಸೂಚಿ ತಪ್ಪದೆ ಪಾಲಿಸಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಸುತ್ತೋಲೆ ಹೊರಡಿಸಿದೆ.