ಫೆಡ್ ಕಪ್ಗೆ ಸೆರೆನಾ ವಿಲಿಯಮ್ಸ್ ಲಭ್ಯ
ಲಂಡನ್, ಜ.24: ಮಾಜಿ ವಿಶ್ವ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮುಂದಿನ ತಿಂಗಳು ಟೆನಿಸ್ ಅಂಗಣಕ್ಕೆ ವಾಪಸಾಗಲಿದ್ದು, ಹಾಲೆಂಡ್ ವಿರುದ್ಧ ನಡೆಯಲಿರುವ ಫೆಡ್ ಕಪ್ನಲ್ಲಿ ಅಮೆರಿಕ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಅಮೆರಿಕ ಟೆನಿಸ್ ಸಂಸ್ಥೆ ತಿಳಿಸಿದೆ.
ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ ಬಳಿಕ ವಿಲಿಯಮ್ಸ್ ಯಾವುದೇ ಡಬ್ಲುಟಿಎ ಟೂರ್ನಮೆಂಟ್ನ್ನು ಆಡಿಲ್ಲ. ಮೊದಲ ಮಗುವಿಗೆ ಜನ್ಮ ನೀಡಿ ನಾಲ್ಕು ತಿಂಗಳಾದ ಹಿನ್ನೆಲೆಯಲ್ಲಿ ಫಿಟ್ನೆಸ್ ಕಾರಣಕ್ಕೆ ವರ್ಷದ ಮೊದಲ ಗ್ರಾನ್ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್ನಿಂದ ದೂರ ಉಳಿದಿದ್ದಾರೆ.
ಕಳೆದ ವರ್ಷ ಮೆಲ್ಬೋರ್ನ್ನಲ್ಲಿ 23ನೇ ಗ್ರಾನ್ಸ್ಲಾಮ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದ್ದ ಸೆರೆನಾ ಕಳೆದ ವರ್ಷದ ಡಿಸೆಂಬರ್ನಲ್ಲಿ ಅಬುಧಾಬಿಯಲ್ಲಿ ನಡೆದ ಪ್ರದರ್ಶನ ಪಂದ್ಯದಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ ವಿರುದ್ಧ ಸೋತಿದ್ದರು.
ಫೆ.10-11ರಂದು ಉತ್ತರ ಕರೊಲಿನಾದಲ್ಲಿ ನಡೆಯಲಿರುವ ಫೆಡ್ ಕಪ್ನಲ್ಲಿ 36ರ ಹರೆಯದ ಸೆರೆನಾ ತನ್ನ ಹಿರಿಯ ಸಹೋದರಿ ವೀನಸ್ ಹಾಗೂ ವಿಶ್ವದ ನಂ.9ನೇ ಆಟಗಾರ ಕೊಕೊ ವಾಂಡ್ವೆಘ್ರೊಂದಿಗೆ ಆಡಲಿದ್ದಾರೆ.
ಕಳೆದ ವರ್ಷ ಬೆಲಾರಸ್ನ್ನು ಮಣಿಸಿದ್ದ ಅಮೆರಿಕ 18ನೇ ಫೆಡ್ ಕಪ್ ಜಯಿಸಿ ದಾಖಲೆ ನಿರ್ಮಿಸಿತ್ತು.