ತ್ರಿವರ್ಣ ಧ್ವಜಕ್ಕೆ ಗೌರವ ಸೂಚಿಸಿದ ಅಫ್ರಿದಿ ವಿಡಿಯೋ ವೈರಲ್
ಭಾರತೀಯರಿಂದ ಪಾಕ್ ಕ್ರಿಕೆಟಿಗನಿಗೆ ಮೆಚ್ಚುಗೆ
ಸ್ವಿಝರ್ ಲ್ಯಾಂಡ್, ಫೆ.10: ಇಲ್ಲಿನ ಸೈಂಟ್ ಮೊರಿಟ್ಝ್ ನಗರದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ಬಳಿಕ ಅಭಿಮಾನಿಯೊಬ್ಬರ ಜೊತೆ ಫೊಟೊಗೆ ಪೋಸ್ ನೀಡುವ ವೇಳೆ ಭಾರತದ ಧ್ವಜಕ್ಕೆ ಗೌರವ ಸೂಚಿಸಿದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿಯವರಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಫೆಬ್ರವರಿ 8ರಂದು ಸೈಂಟ್ ಮೊರಿಟ್ಝ್ ನಗರದ ಸ್ಕಿ ರಿಸಾರ್ಟ್ ನಲ್ಲಿ ಕ್ರಿಕೆಟ್ ಕ್ಷೇತ್ರದ ದಿಗ್ಗಜರಾದ ವಿರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಮೈಕ್ ಹಸ್ಸಿ, ಪಾಕಿಸ್ತಾನದ ಶೋಯೆಬ್ ಅಖ್ತರ್ ಹಾಗೂ ಶ್ರೀಲಂಕಾದ ಮಹೇಲಾ ಜಯವರ್ಧನೆ ಸೇರಿದಂತೆ ಹಲವು ಕ್ರಿಕೆಟಿಗರ ಟಿ-20 ಪಂದ್ಯವೊಂದರಲ್ಲಿ ಭಾಗವಹಿಸಿದ್ದರು.
ಪ್ಯಾಲೇಸ್ ಡೈಮಂಡ್ಸ್ ಹಾಗೂ ರಾಯಲ್ಸ್ ತಂಡಗಳ ನಡುವೆ ಪಂದ್ಯಾಟ ನಡೆದಿದ್ದು, ವಿರೇಂದ್ರ ಸೆಹ್ವಾಗ್ ಹಾಗೂ ಪಾಕಿಸ್ತಾನದ ಶಾಹಿದ್ ಅಫ್ರಿದಿ ತಂಡಗಳ ನಾಯಕರಾಗಿದ್ದರು.
ಪಂದ್ಯದ ನಂತರ ಅಫ್ರಿದಿ ತಮ್ಮ ಅಭಿಮಾನಿಯೊಂದಿಗೆ ಫೋಟೋಗೆ ಪೋಸ್ ನೀಡುತ್ತಿದಾಗ ಮಡಚಿದ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಭಾರತೀಯ ಅಭಿಮಾನಿಯೊಬ್ಬರು ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗಿದ್ದರು. ಇದನ್ನು ಗಮನಿಸಿದ ಅಫ್ರಿದಿ 'ನಿಮ್ಮ ಧ್ವಜವನ್ನು ಸರಿಯಾಗಿ ಹಿಡಿದುಕೊಳ್ಳಿ' ಎಂದು ಹೇಳಿದರು. ಅದರಂತೆ ಅಭಿಮಾನಿ ತ್ರಿವರ್ಣ ಧ್ವಜವನ್ನು ಸರಿಯಾಗಿ ಹಿಡಿದುಕೊಂಡಿದ್ದು, ಅಫ್ರಿದಿ ನಂತರ ಸೆಲ್ಫೀ ಕ್ಲಿಕ್ಕಿಸಿಕೊಂಡರು. ಅಫ್ರಿದಿಯವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರತೀಯರಿಂದ ಪಾಕ್ ಕ್ರಿಕೆಟಿಗನಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪಂದ್ಯದಲ್ಲಿ ಅಫ್ರಿದಿಯ ತಂಡವು 6 ವಿಕೆಟ್ ಗಳಿಂದ ಜಯ ಸಾಧಿಸಿದೆ. ಸೆಹ್ವಾಗ್ ರ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 164 ರನ್ ಬಾರಿಸಿದರೆ, ರಾಯಲ್ಸ್ ತಂಡವು 15.4 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 166 ರನ್ ಬಾರಿಸಿದೆ.