ಫಿಫಾ: ಜಪಾನ್ ವಿಶ್ವಕಪ್ ಅಭಿಯಾನ ಅಂತ್ಯ
ರಷ್ಯಾ, ಜು.3: ಮುಕ್ತಾಯ ಕ್ಷಣದಲ್ಲಿ ಬದಲಿ ಆಟಗಾರ ನಸೆರ್ ಚಾಡ್ಲಿ ಗಳಿಸಿದ ಅದ್ಭುತ ಗೋಲಿನ ನೆರವಿನಿಂದ ಜಪಾನ್ ತಂಡವನ್ನು 3-2 ಗೋಲುಗಳಿಂದ ಕೆಡವಿದ ಬೆಲ್ಜಿಯಂ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ತಲುಪಿದೆ. ಸೋಮವಾರ ನಡೆಯುವ ಎಂಟರ ಘಟ್ಟದ ಪಂದ್ಯದಲ್ಲಿ ಬೆಲ್ಜಿಯಂ ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡವನ್ನು ಎದುರಿಸಲಿದೆ.
ಒಂದು ಹಂತದಲ್ಲಿ ಗೆಂಕಿ ಹರಗುಚಿ ಮತ್ತು ತಕಾಶಿ ಇನೂಯಿ ಗೋಲುಗಳ ನೆರವಿನಿಂದ 2-0 ಮುನ್ನಡೆ ಹೊಂದಿದ್ದ ಜಪಾನ್ ಅಂತಿಮ ಕ್ಷಣದಲ್ಲಿ ಆಘಾತ ಅನುಭವಿಸಿತು. ಹೆಚ್ಚುವರಿ ಅವಧಿಯ ನಾಲ್ಕನೇ ನಿಮಿಷದಲ್ಲಿ ಥಾಮಸ್ ಮೆಯುನೀರ್ ಅವರ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದ ಚಾಡ್ಲಿ ಬೆಲ್ಜಿಯಂ ಗೆಲುವಿನ ರೂವಾರಿಯಾದರು. ಇದಕ್ಕೂ ಮುನ್ನ ಜಾನ್ ವೆರ್ಟೊಗೆನ್ ಹಾಗೂ ಬದಲಿ ಆಟಗಾರ ಮರೋನ್ ಫೆಲಾನಿ ಎರಡು ಗೋಲುಗಳಲ್ಲಿ ಹೊಡೆದು ಸಮಬಲ ಸ್ಥಾಪಿಸಿದ್ದರು.
"ವಿಶ್ವಕಪ್ನಲ್ಲಿ ಇಂಥದ್ದು ಸಂಭವಿಸುತ್ತದೆ. ಇದು ನಡತೆಯ ಪರೀಕ್ಷೆ ಮತ್ತು ತಂಡದ ಪರೀಕ್ಷೆ. ಇದು ತಂಡದ ಆಟಗಾರರ ಗುಂಪಿನ ಬಗ್ಗೆ ಎಲ್ಲವನ್ನೂ ಹೇಳುತ್ತದೆ" ಎಂದು ಬೆಲ್ಜಿಯಂ ಕೋಚ್ ರೊಬೆರ್ಟೊ ಮಾರ್ಟಿನೆಸ್ ಹೇಳಿದರು.
ಗುಂಪು ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ ತಂಡವಾದರೂ ನಾಕೌಟ್ನಲ್ಲಿ ನಿರ್ಗಮಿಸುವ ಭೀತಿ ಎದುರಿಸಿದ್ದ ಬೆಲ್ಜಿಯಂ, 1970ರ ಬಳಿಕ ಎರಡು ಗೋಲುಗಳ ಹಿನ್ನಡೆಯಿಂದ ಚೇತರಿಸಿಕೊಂಡು ಗೆಲುವಿನ ದಡ ಸೇರಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1970ರಲ್ಲಿ ಪಶ್ಚಿಮ ಜರ್ಮನಿ ಇದೇ ರೀತಿ ಇಂಗ್ಲೆಂಡ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿತ್ತು. ಬೆಲ್ಜಿಯಂನ ’ಸುವರ್ಣ ತಲೆಮಾರು’ ನಾಲ್ಕು ಪಂದ್ಯಗಳಲ್ಲಿ 12 ಗೋಲು ಗಳಿಸಿದ್ದು, ಎಂಟರ ಘಟ್ಟದಲ್ಲಿ ಬ್ರೆಝಿಲ್ಗೆ ಸವಾಲೊಡ್ಡಲು ಸಜ್ಜಾಗಿದೆ.
ನೀರಸ ಮೊದರ್ಲಾಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದವು. 48ನೇ ನಿಮಿಷದಲ್ಲಿ ಹರಗುಚಿ, ಜಪಾನ್ಗೆ ಮುನ್ನಡೆ ತಂದುಕೊಟ್ಟರು. ಇದಾದ ನಾಲ್ಕೇ ನಿಮಿಷಗಳಲ್ಲಿ ಇಲೂನಿ 25 ಮೀಟರ್ ಅಂತರದಿಂದ ಕ್ಷಿಪಣಿ ವೇಗದಲ್ಲಿ ಚೆಂಡನ್ನು ನೆಟ್ ಸೇರಿಸಿ ಮುನ್ನಡೆ ಹಿಗ್ಗಿಸಿದರು. ಪ್ರತಿದಾಳಿ ಸಂಘಟಿಸಿದ ರೆಡ್ ಡೆವಿಲ್ಸ್ 69 ಹಾಗೂ 74ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸಿ ಅಪಾಯದಿಂದ ಪಾರಾದರು. ಅಂತಿಮವಾಗಿ ಮುನ್ಪಡೆ ಆಟಗಾರ ಚಾಡ್ಲಿ ಗೋಲು ತಂಡಕ್ಕೆ ಗೆಲುವು ತಂದುಕೊಟ್ಟಿತು.