ಆರ್ಸಿಬಿ ಕೋಚ್ ಹುದ್ದೆಯಿಂದ ವೆಟೋರಿ ಉಚ್ಚಾಟನೆ
ಬೆಂಗಳೂರು, ಆ.24: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಫ್ರಾಂಚೈಸಿ ತನ್ನ ತಂಡದಲ್ಲಿ ಕೆಲವು ಬದಲಾವಣೆಗೆ ಮುಂದಾಗಿದೆ. ಮುಖ್ಯ ಕೋಚ್ ಡೇನಿಯಲ್ ವೆಟೋರಿ(ನ್ಯೂಝಿಲೆಂಡ್), ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಟ್ರೆಂಟ್ ವುಡ್ಹಿಲ್(ಆಸ್ಟ್ರೇಲಿಯ) ಹಾಗೂ ಬೌಲಿಂಗ್ ಕೋಚ್ ಆ್ಯಂಡ್ರೂ ಮೆಕ್ಡೊನಾಲ್ಡ್ಗೆ(ಆಸ್ಟ್ರೇಲಿಯ) ತಮ್ಮ ಹುದ್ದೆಯನ್ನು ತ್ಯಜಿಸುವಂತೆ ಸೂಚಿಸಿದೆ ಎಂದು ‘ಬೆಂಗಳೂರು ಮಿರರ್’ ಪತ್ರಿಕೆ ವರದಿ ಮಾಡಿದೆ.
ಕಳೆದ ಋತುವಿನಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದ ಆಶೀಷ್ ನೆಹ್ರಾ ಬೌಲಿಂಗ್ ಮೆಂಟರ್ ಆಗಿ ಮುಂದುವರಿಯಲಿದ್ದಾರೆ. ಮುಂದಿನ ವಾರ ಹೊಸ ಆಡಳಿತಮಂಡಳಿ ಘೋಷಣೆಯಾಗಲಿದ್ದು ನಾಯಕ ವಿರಾಟ್ ಕೊಹ್ಲಿಯ ಸಲಹೆ ಅತ್ಯಂತ ಮಹತ್ವ ಪಡೆಯಲಿದೆ.
ಭಾರತದ ಮಾಜಿ ಕೋಚ್ ಹಾಗೂ ಪ್ರಸ್ತುತ ಆರ್ಸಿಬಿ ಬ್ಯಾಟಿಂಗ್ ಸಲಹೆಗಾರರಾಗಿರುವ ಗ್ಯಾರಿ ಕರ್ಸ್ಟನ್ ಕೋಚಿಂಗ್ ಹ್ಯಾಟ್ ಧರಿಸುವ ಫೇವರಿಟ್ ಆಗಿದ್ದಾರೆ.
ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ಸಂಜಯ್ ಬಂಗಾರ್ ಮುಖ್ಯ ಕೋಚ್ ಹುದ್ದೆ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.