ಡೆಲ್ಲಿ ಕ್ಯಾಪಿಟಲ್ಸ್ ಗೆ192 ರನ್ ಗೆಲುವಿನ ಗುರಿ
ರಹಾನೆ ಅಜೇಯ ಶತಕ, ಸ್ಮಿತ್ ಅರ್ಧಶತಕ
ಜೈಪುರ, ಎ.22: ಇಲ್ಲಿನ ಸವಾಯ್ ಮಾನಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 40ನೇ ಐಪಿಎಲ್ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಟಾಸ್ ಗೆದ್ದು ಡೆಲ್ಲಿ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಅಜಿಂಕ್ಯಾ ರಹಾನೆ ಶತಕದ ಬಲದಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
ರಾಜಸ್ಥಾನ ತಂಡದ ಪರ ಬ್ಯಾಟಿಂಗ್ ಆರಂಭಿಸಿದ ಮಾಜಿ ನಾಯಕ ಅಜಿಂಕ್ಯಾ ರಹಾನೆ (ಅಜೇಯ 105, 63 ಎಸೆತ, 11 ಬೌಂಡರಿ, 3 ಸಿಕ್ಸರ್) ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ (0) ಉತ್ತಮ ಆರಂಭ ಒದಗಿಸಿಕೊಡುವಲ್ಲಿ ವಿಫಲರಾದರು. ತಂಡದ ಮೊತ್ತ 5 ರನ್ ಆಗುವಷ್ಟರಲ್ಲಿ ಸ್ಯಾಮ್ಸನ್ ರನೌಟ್ ಬಲೆಗೆ ಬಿದ್ದರು. ಈ ರನೌಟ್ಗೆ ಕಾರಣವಾದ ಕಾಗಿಸೋ ರಬಾಡ ಡೆಲ್ಲಿ ತಂಡದ ಸಂಭ್ರಮಕ್ಕೆ ಕಾರಣವಾದರು.
ಈ ಬಳಿಕ ರಹಾನೆಗೆ ಜೊತೆಗೂಡಿದ ನಾಯಕ ಸ್ಟೀವನ್ ಸ್ಮಿತ್ (50, 32 ಎಸೆತ, 8 ಬೌಂಡರಿ) ತಂಡದ ಮೊತ್ತವನ್ನು ಶೀಘ್ರಗತಿಯಲ್ಲಿ ಹೆಚ್ಚಿಸುವ ಪ್ರಯತ್ನ ಆರಂಭಿಸಿದರು. ರಹಾನೆ ಆಕ್ರಮಣಕಾರಿ ಆಟಕ್ಕೆ ಮನಸ್ಸು ಮಾಡಿದರು. ಆರಂಭದಲ್ಲಿ ಸ್ಮಿತ್ ನಿಧಾನವಾಗಿ ರನ್ ಕಲೆಹಾಕುವತ್ತ ಲಕ್ಷ ವಹಿಸಿದರೂ ಬಳಿಕ ಅಬ್ಬರಿಸಲಾರಂಭಿಸಿದರು.
ನಾಯಕತ್ವ ಜವಾಬ್ದಾರಿಯ ‘ಭಾರ’ವನ್ನು ಇಳಿಸಿ ಹಗುರವಾದಂತೆ ಕಂಡುಬಂದ ರಹಾನೆ ಕ್ರೀಡಾಂಗಣದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿ ಆಟಕ್ಕೆ ರಂಗು ತಂದರು. ಈ ಇಬ್ಬರೂ 2ನೇ ವಿಕೆಟ್ ಜೊತೆಯಾಟದಲ್ಲಿ 75 ಎಸೆತಗಳಲ್ಲಿ 130 ರನ್ ಗಳಿಸಿದರು. ಅರ್ಧಶತಕ ಗಳಿಸುತ್ತಿದ್ದಂತೆಯೇ ಸ್ಮಿತ್ ಅವರು ಅಕ್ಷರ್ ಪಟೇಲ್ ಎಸೆತದಲ್ಲಿ ಕ್ರಿಸ್ ಮೊರಿಸ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಬೆನ್ ಸ್ಟೋಕ್ಸ್ (8) ವೈಫಲ್ಯ ಅನುಭವಿಸಿದರು. ಅಶ್ಟನ್ ಟರ್ನರ್(0) ಮಿಂಚಲಿಲ್ಲ. ಸ್ಟುವರ್ಟ್ ಬಿನ್ನಿ (19, 13 ಎಸೆತ, 2 ಬೌಂಡರಿ ) ಕೊನೆಯಲ್ಲಿ ಸಿಡಿದರು.
ಡೆಲ್ಲಿ ಪರ ರಬಾಡ (37ಕ್ಕೆ 2) ಇಶಾಂತ್ ಶರ್ಮಾ (29ಕ್ಕೆ 1), ಮೊರಿಸ್ (41ಕ್ಕೆ 1 ) ಹಾಗೂಅಕ್ಷರ್ (39ಕ್ಕೆ 1) ಬೌಲಿಂಗ್ನಲ್ಲಿ ಮಿಂಚಿದರು.