ನಾಲ್ಕನೇ ಟಿ-20: ಭಾರತಕ್ಕೆ ಮತ್ತೊಂದು ‘ಸೂಪರ್’ ಜಯ
ವೆಲ್ಲಿಂಗ್ಟನ್, ಜ.31: ನ್ಯೂಝಿಲ್ಯಾಂಡ್ ಮತ್ತು ಭಾರತ ತಂಡಗಳ ನಡುವಿನ ನಾಲ್ಕನೇ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯ ಇಂದು ಟೈ ಆಗಿದ್ದು, ವಿಜೇತರನ್ನು ನಿರ್ಧರಿಸಲು ಬಳಿಕ ನಡೆದ ಸೂಪರ್ ಓವರ್ ನಲ್ಲಿ ಭಾರತ ಜಯ ಗಳಿಸಿದೆ.
ಸೂಪರ್ ಓವರ್ ನಲ್ಲಿ ಗೆಲುವಿಗೆ 14 ರನ್ ಗಳಿಸಬೇಕಿದ್ದ ಭಾರತ 1 ವಿಕೆಟ್ ನಷ್ಟದಲ್ಲಿ 16 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ನ್ಯೂಝಿಲ್ಯಾಂಡ್ ತಂಡ ಸೂಪರ್ ಓವರ್ ನಲ್ಲಿ 1 ವಿಕೆಟ್ ನಷ್ಟದಲ್ಲಿ 13 ರನ್ ಗಳಿಸಿತ್ತು. ಸೌಥಿ ಓವರ್ ನಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಲೋಕೇಶ್ ರಾಹುಲ್ 10 ರನ್ (3ಎ, 1ಸಿ, 1ಬೌ) , ನಾಯಕ ವಿರಾಟ್ ಕೊಹ್ಲಿ 6 (2 ಎ 1ಬೌ) ರನ್ ಗಳಿಸಿದರು.
ಇದರೊಂದಿಗೆ ಭಾರತ ಸೂಪರ್ ಓವರ್ ನಲ್ಲಿ ಎರಡನೇ ಜಯ ಗಳಿಸಿದ್ದು, ಈ ಗೆಲುವಿನೊಂದಿಗೆ ಭಾರತ 5 ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ.
ಇದಕ್ಕೂ ಮೊದಲು ಗೆಲುವಿಗೆ 166 ರನ್ ಗಳಿಸಬೇಕಿದ್ದ ನ್ಯೂಝಿಲ್ಯಾಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 165 ರನ್ ಗಳಿಸುವ ಮೂಲಕ ಪಂದ್ಯ ಟೈ ಆಗಿ ಕೊನೆಗೊಂಡಿತು.
ಕೊನೆಯ ಓವರ್ ನ ಕೊನೆಯ ಎಸೆತದಲ್ಲಿ ನ್ಯೂಝಿಲ್ಯಾಂಡ್ ಗೆಲುವಿಗೆ 2 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆದರೆ ಮಿಚೆಲ್ ಸ್ಯಾಂಟ್ನೆರ್ ಅವರು ಶಾರ್ದುಲ್ ಠಾಕೂರ್ ಅವರ ಕೊನೆಯ ಎಸೆತದಲ್ಲಿ 1 ರನ್ ಗಳಿಸಿ ಸ್ಕಾಟ್ ಕುಗ್ಲೆಲೆಜಿನ್ ನೆರವಿನಲ್ಲಿ ಎರಡನೇ ರನ್ ಗಳಿಸುವ ಯತ್ನದಲ್ಲಿದ್ದಾಗ ಅವರನ್ನು ಸಂಜು ಸ್ಯಾಮ್ಸನ್ ಮತ್ತು ಲೋಕೇಶ್ ರಾಹುಲ್ ಸೇರಿಕೊಂಡು ರನೌಟ್ ಮಾಡಿದರು. ಇದರೊಂದಿಗೆ ಪಂದ್ಯ ಮತ್ತೊಮ್ಮೆ ರೋಚಕ ಟೈ ಆಗಿತ್ತು.