ಸೆನಾ 2ನೇ ಸುತ್ತಿಗೆ , ಪ್ರಣಯ್ಗೆ ಸೋಲು
ಬಾರ್ಸಿಲೋನ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ
ಬಾರ್ಸಿಲೋನ, ಫೆ.19: ಒಲಿಂಪಿಕ್ಸ್ ಕಂಚು ಪ್ರಶಸ್ತಿ ಪುರಸ್ಕೃತ ಶಟ್ಲರ್ ಸೈನಾ ನೆಹ್ವಾಲ್ ಅವರು ಬಾರ್ಸಿಲೋನ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಬುಧವಾರ ನಡೆದ 170,000 ಯುಎಸ್ ಡಾಲರ್ ಮೊತ್ತದ ಪ್ರಶಸ್ತಿಯ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ಅವರು ಜರ್ಮನಿಯ ವೈವೊನೆ ಲಿ ವಿರುದ್ಧ 21-16, 21-14 ನೇರ ಗೇಮ್ ಅಂತರದಿಂದ ಜಯ ಗಳಿಸಿದರು. ಸೈನಾ ಎದುರಾಳಿಯ ಸವಾಲನ್ನು ಕೇವಲ 35 ನಿಮಿಷಗಳಲ್ಲಿ ಮೆಟ್ಟಿ ನಿಂತು ವಿಜಯ ಸಾಧಿಸಿದರು.
ಮಿಕ್ಸೆಡ್ ಡಬಲ್ಸ್ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕ್ಕಿ ರೆಡ್ಡಿ ಜಯ ಗಳಿಸಿದ್ದಾರೆ. ಇವರು ಪ್ರಥಮ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್ ನ ಮಥಾಯಸ್ ಕ್ರಿಸ್ಟಿಯೆನ್ಸನ್ ಮತ್ತು ಅಲೆಕ್ಸೆಂಡ್ರಾ ಬೊಜೆ ವಿರುದ್ಧ 10-21, 21-16, 21-17 ಅಂತರದಿಂದ ಜಯ ಸಾಧಿಸಿದರು. ಎಚ್.ಎಸ್. ಪ್ರಣಯ್ ಅವರು ಪುರುಷರ ಸಿಂಗಲ್ಸ್ ನಲ್ಲಿ ಮಲೇಶ್ಯದ ಡರೆನ್ ಲೀವ್ ವಿರುದ್ಧ 18-21, 15-21 ಗೇಮ್ಗಳ ಅಂತರದಲ್ಲಿ ಸೋತಿದ್ದಾರೆ .
ಸೈನಾ ಒಲಿಂಪಿಕ್ಸ್ನಲ್ಲಿ ಅವಕಾಶ ಪಡೆಯಲು ಎದುರು ನೋಡುತ್ತಿದ್ದಾರೆ. 2019ರಲ್ಲಿ ಅಸ್ಥಿರ ಪ್ರದರ್ಶನ ನೀಡಿದ್ದ ಸೈನಾ 2020ರಲ್ಲಿ ಈ ವರೆಗೆ ಉತ್ತಮ ಪ್ರದರ್ಶನ ನೀಡಿಲ್ಲ. ಮೂರು ಈವೆಂಟ್ಗಳಲ್ಲಿ 1 ಬಾರಿ ಮಾತ್ರ ಎರಡನೇ ಸುತ್ತು ಪ್ರವೇಶಿಸಿದ್ದಾರೆ.