“ಈ ವೈರಸ್ ಯಾವುದೇ ಜನಾಂಗ, ಧರ್ಮವನ್ನು ನೋಡುವುದಿಲ್ಲ”
ದ್ವೇಷದ ಟ್ವೀಟ್ ಮಾಡಿದ ಬಬಿತಾಗೆ ಜ್ವಾಲಾ ಗುಟ್ಟಾ ಪ್ರತಿಕ್ರಿಯೆ
ಹೊಸದಿಲ್ಲಿ: ಭಾರತದಲ್ಲಿ ಕೊರೋನ ವೈರಸ್ ಹರಡುವುದಕ್ಕೆ ಸಂಬಂಧಿಸಿದಂತೆ ಕುಸ್ತಿಪಟು, ಇತ್ತೀಚೆಗೆ ಬಿಜೆಪಿ ಸೇರಿದ ಬಬಿತಾ ಫೋಗಟ್ ನೀಡಿರುವ ಹೇಳಿಕೆ ವಾಪಸ್ ಪಡೆಯಬೇಕು ಎಂದು ಭಾರತದ ಮಾಜಿ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಸಲಹೆ ಮಾಡಿದ್ದಾರೆ.
“ಕ್ಷಮಿಸಿ ಬಬಿತಾ.. ಈ ವೈರಸ್ ಯಾವುದೇ ಜನಾಂಗ ಅಥವಾ ಧರ್ಮವನ್ನು ನೋಡುತ್ತದೆ ಎಂದು ನನಗನಿಸುವುದಿಲ್ಲ. ನಿಮ್ಮ ಹೇಳಿಕೆಯನ್ನು ದಯವಿಟ್ಟು ವಾಪಸ್ ಪಡೆಯಿರಿ.. ನಾವು ಕ್ರೀಡಾಪಟುಗಳು. ಜಾತ್ಯತೀತವಾಗಿ ನಾವು ನಮ್ಮ ಸುಂದರ ದೇಶವನ್ನು ಪ್ರತಿನಿಧಿಸಿದ್ದೇವೆ. ನಾವು ಗೆದ್ದಾಗ ಈ ಎಲ್ಲ ಜನ ತಮ್ಮದೇ ಗೆಲುವು ಎಂಬಂತೆ ಸಂಭ್ರಮಿಸಿದ್ದಾರೆ”ಎಂದು 2010ರ ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಹೇಳಿದ್ದಾರೆ.
ಬಬಿತಾಗೆ ಮಾಡಿದ ಟ್ವೀಟ್ ಹಿನ್ನೆಲೆಯಲ್ಲಿ ಬಂದ ಸರಣಿ ನಿಂದನಾತ್ಮಕ ಟ್ವೀಟ್ಗಳಿಗೆ ಕೂಡಾ ಜ್ವಾಲಾ ಗುಟ್ಟಾ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರು ಹಾಗೂ ವೈದ್ಯರ ವಿರುದ್ಧ ದಾಳಿ ಮಾಡುವುದನ್ನು ತಾವು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜ್ವಾಲಾ ಗುಟ್ಟಾ ಅವರ ಅಭಿಪ್ರಾಯವನ್ನು ಹಲವು ಮಂದಿ ಕ್ರೀಡಾಪಟುಗಳು ಬೆಂಬಲಿಸಿದ್ದಾರೆ.