ಇಂಗ್ಲೆಂಡ್ ನ್ನು ಮಣಿಸಿದ ಐರ್ಲ್ಯಾಂಡ್
ಸೌಥಾಂಪ್ಟನ್: ಇಂಗ್ಲೆಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಐರ್ಲ್ಯಾಂಡ್7 ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ.
ಆರಂಭಿಕ ಬ್ಯಾಟ್ಸ್ಮನ್ ಪಾಲ್ ಸ್ಟಿರ್ಲಿಂಗ್ (142) ಮತ್ತು ನಾಯಕ ಆ್ಯಂಡ್ರೂ ಬಾಲ್ಬಿರ್ನಿ(113) ಸೊಗಸಾದ ಶತಕಗಳ ನೆರವಿನಲ್ಲಿ ಐರ್ಲ್ಯಾಂಡ್ ಸುಲಭದ ಜಯ ದಾಖಲಿಸಿತು.
ಗೆಲುವಿಗೆ 329ರನ್ಗಳ ಸವಾಲನ್ನು ಪಡೆದ ಐರ್ಲ್ಯಾಂಡ್ ಇನ್ನೂ 1 ಎಸೆತ ಬಾಕಿ ಉಳಿಸಿ 3 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ದಾಖಲಿಸುವ ಮೂಲಕ ಗೆಲುವಿನ ದಡ ಸೇರಿತು. ಈ ಗೆಲುವಿನೊಂದಿಗೆ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ನಲ್ಲಿ 10 ಅಂಕಗಳನ್ನು ಐರ್ಲ್ಯಾಂಡ್ ತನ್ನ ಖಾತೆಗೆ ಸೇರಿಸಿಕೊಂಡಿತು.
ಕೊನೆಯ ಓವರ್ನಲ್ಲಿ ಐರ್ಲ್ಯಾಂಡ್ನ ಗೆಲುವಿಗೆ 8 ರನ್ಗಳ ಆವಶ್ಯಕತೆ ಇತ್ತು. ಹ್ಯಾರಿ ಟೆಕ್ಟರ್(ಔಟಾಗದೆ 29) ಮತ್ತು ಆಲ್ರೌಂಡರ್ ಕೆವಿನ್ ಓ’ಬ್ರಿಯನ್ (ಔಟಾಗದೆ 21 ರನ್ ) ಮುರಿಯದ ಜೊತೆಯಾಟದಲ್ಲಿ 4ನೇ ವಿಕೆಟ್ಗೆ 50 ರನ್ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
9 ಓವರ್ಗಳಲ್ಲಿ 50ಕ್ಕೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಐರ್ಲ್ಯಾಂಡ್ಗೆ ಎರಡನೇ ವಿಕೆಟ್ಗೆ 214 ರನ್ ಸೇರಿಸುವ ಮೂಲಕ ಸ್ಟಿರ್ಲಿಂಗ್ ಮತ್ತು ಬಾಲ್ಬಿರ್ನಿ ಗೆಲುವಿನ ಅಡಿಪಾಯ ಹಾಕಿಕೊಟ್ಟರು. ಗರೆಥ್ ಡೆಲಾನಿ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಸ್ಟಿರ್ಲಿಂಗ್ ಎಂಟನೇ ಓವರ್ನಲ್ಲಿ ಸಾಕಿಬ್ ಎಸೆತಗಳಲ್ಲಿ ಸಿಕ್ಸರ್ಗಳನ್ನು ಬಾರಿಸಿ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು.
ತನ್ನ ಪಾಲುದಾರ ಡೆಲಾನಿಯನ್ನು ಕಳೆದುಕೊಂಡರೂ, ನಾಯಕ ಬಾಲ್ಬಿರ್ನಿಯಿಂದ ಅಗತ್ಯವಾದ ಬೆಂಬಲವನ್ನು ಪಡೆದು ಬ್ಯಾಟಿಂಗ್ ಮುಂದುವರಿಸಿದರು. ಅಂತಿಮವಾಗಿ ಕುರ್ರನ್ ನೇರ ಹೊಡೆತಕ್ಕೆ ಸ್ಟಿರ್ಲಿಂಗ್ ರನೌಟಾದರು. ಔಟಾಗುವ ಮುನ್ನ 142 ರನ್ (128ಎ, 9ಬೌ,6ಸಿ) ಗಳಿಸಿದರು. ಏಕದಿನ ಕ್ರಿಕೆಟ್ನಲ್ಲಿ 9ನೇ ಶತಕ ಪೂರೈಸಿದರು.
6ನೇ ಶತಕವನ್ನು ಪೂರೈಸಿದ ಬಾಲ್ಬಿರ್ನಿ 113 ರನ್(112ಎ, 12ಬೌ) ಗಳಿಸಿ ಔಟಾದರು. ಆತಿಥೇಯರು ಸ್ಟಿರ್ಲಿಂಗ್ಗೆ ಎರಡು ಕ್ಯಾಚ್ಗಳನ್ನು ಒಳಗೊಂಡಂತೆ ಮೂರು ಜೀವದಾನ ನೀಡಿರುವುದು ದುಬಾರಿಯಾಗಿ ಪರಿಣಮಿಸಿತು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 49.5 ಓವರ್ಗಳಲ್ಲಿ 328 ರನ್ಗಳಿಗೆ ಆಲೌಟಾಗಿತ್ತು. ನಾಯಕ ಮೊರ್ಗನ್ 106ರನ್(84ಎ, 15ಬೌ,4ಸಿ) , ಟಾಮ್ ಬ್ಯಾಂಟನ್ (58 ) ಮತ್ತು ಆಲ್ಡೌಂಡರ್ ಡೇವಿಡ್ ವಿಲ್ಲಿ(51) ಅರ್ಧಶತಕಗಳ ನೆರವಿನಲ್ಲಿ ಇಂಗ್ಲೆಂಡ್ ದೊಡ್ಡ ಮೊತ್ತದ ಸವಾಲನ್ನು ಸೇರಿಸಿತ್ತು.