ಆಲ್ಕೋಹಾಲ್ ಕಂಪೆನಿಯ ಲಾಂಛನ ಇರುವ ಜರ್ಸಿ ಧರಿಸಲಾರೆ : ಬಾಬರ್ ಆಝಮ್
ಲಂಡನ್, ಸೆ.4: ಟ್ವೆಂಟಿ-20 ಬ್ಲಾಸ್ಟ್ ಟೂರ್ನಿಯಲ್ಲಿ ಕೌಂಟಿ ಸಮರ್ಸೆಟ್ ತಂಡದ ಪರ ಆಡುತ್ತಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಝಮ್ ತಾನು ಯಾವುದೇ ಆಲ್ಕೋಹಾಲ್ ಕಂಪೆನಿಯ ಲಾಂಛನವನ್ನು ತನ್ನ ಜರ್ಸಿಯ ಮೇಲೆ ಪ್ರದರ್ಶಿಸುವುದಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಪ್ರವಾಸವು ಮಂಗಳವಾರ ಮುಗಿದ ನಂತರ ಕೌಂಟಿ ತಂಡ ಸಮರ್ಸೆಟ್ ಸೇರಿದ ಬಾಬರ್ ಆಝಮ್ ಮೊದಲ ಪಂದ್ಯದಲ್ಲಿ ಆಲ್ಕೋಹಾಲ್ ಕಂಪೆನಿಯೊಂದರ ಲಾಂಛನವನ್ನು ಹೊಂದಿರುವ ಶರ್ಟ್ ಧರಿಸಿ ಆಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಇದರ ಬಗ್ಗೆ ಟೀಕೆ ವ್ಯಕ್ತವಾಗಿತ್ತು.
ತನ್ನ ತಪ್ಪಿನ ಅರಿವಾಗುತ್ತಲೇ ಆಝಮ್ ಅವರು ತಾನು ಇನ್ನು ಆಲ್ಕೋಹಾಲ್ ಕಂಪೆನಿಯ ಲಾಂಛನವನ್ನು ಹೊಂದಿರುವ ಅಂಗಿಯನ್ನು ಧರಿಸಿ ಆಡಲಾರೆ ಎಂದು ಸೋಮರ್ಸೆಟ್ ತಂಡಕ್ಕೆ ತಿಳಿಸಿರುವುದಾಗಿ ಮತ್ತು ಈ ನಿಟ್ಟಿನಲ್ಲಿ ಅವರು ಒಪ್ಪಂದ ಮಾಡಿಕೊಂಡಿದ್ದಾರೆಂದು ಅವರ ನಿಕಟವರ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆಝಮ್ ಜೆರ್ಸಿಯ ಮೇಲೆ ಆಲ್ಕೋಹಾಲ್ ಕಂಪೆನಿಯ ಲಾಂಛನವನ್ನು ತಪ್ಪಾಗಿ ಮುದ್ರಿಸಲಾಗಿದೆ. ಮುಂದಿನ ಪಂದ್ಯಕ್ಕೆ ಅವರ ಜೆರ್ಸಿಯಿಂದ ಅದನ್ನು ತೆಗೆದುಹಾಕಲಾಗುವುದು ಎಂದು ಕೌಂಟಿ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಸಮರ್ ಸೆಟ್ ಪರ ಮೊದಲ ಪಂದ್ಯದಲ್ಲಿ ಬಾಬರ್ 42 ರನ್ ಗಳಿಸಿದರು ಮತ್ತು ಅಪೂರ್ವ ಕ್ಯಾಚ್ ತೆಗೆದುಕೊಂಡು ತಮ್ಮ ತಂಡಕ್ಕೆ 16 ರನ್ಗಳ ಅಂತರದಲ್ಲಿ ಜಯ ದಾಖಲಿಸಲು ನೆರವಾದರು.