ಕಿಶನ್ -ಪೊಲಾರ್ಡ್ ಹೋರಾಟ ವ್ಯರ್ಥ: ಮುಂಬೈ ವಿರುದ್ಧ 'ಸೂಪರ್' ಜಯ ಗಳಿಸಿದ ಆರ್ಸಿಬಿ
ದುಬೈ, ಸೆ.28: ಈ ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ಇಶನ್ ಕಿಶನ್ ಹಾಗೂ ಕೊನೆಯಲ್ಲಿ ಕಿರನ್ ಪೊಲಾರ್ಡ್ ಪ್ರದರ್ಶಿಸಿದ ಭರ್ಜರಿ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಟೈ ಸಾಧಿಸಿದರೂ, ಕೊನೆಯಲ್ಲಿ ಸೂಪರ್ ಓವರ್ ನಲ್ಲಿ ಆರ್ಸಿಬಿ ಜಯ ಗಳಿಸಿದೆ. ಈ ಮೂಲಕ ಬೆಂಗಳೂರು ತಂಡವು ತಾನಾಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದೆ.
ಗೆಲುವಿಗೆ 202 ರನ್ ಗಳ ಗುರಿ ಪಡೆದಿದ್ದ ಮುಂಬೈ ಇಂಡಿಯನ್ಸ್ ತಂಡವು ಇಶನ್ ಕಿಶನ್ ಹಾಗೂ ಕಿರನ್ ಪೊಲಾರ್ಡ್ ಭರ್ಜರಿ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ಗಳಿಸಿ ಟೈ ಮಾಡಿಕೊಂಡಿತು. ಬಳಿಕ ನಡೆದ ಸೂಪರ್ ಓವರ್ ನಲ್ಲಿ ಮುಂಬೈ 7 ರನ್ ಗಳಿಸಿದರೆ, ಆರ್ಸಿಬಿ ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸಿತು.
ಮುಂಬೈ ಪರ ಇಶನ್ ಕಿಶನ್ 58 ಎಸೆತಗಳಲ್ಲಿ 99 ರನ್ ಹಾಗೂ ಕಿರನ್ ಪೊಲಾರ್ಡ್ 24 ಎಸೆತಗಳಲ್ಲಿ 60 ರನ್ ಸಿಡಿಸಿದರು. ಆರ್ಸಿಬಿ ಪರ ಇಸುರು ಉದಾನ 2 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ದೇವದತ್ ಪಡಿಕ್ಕಲ್, ಆ್ಯರನ್ ಫಿಂಚ್ ಮತ್ತು ಎಬಿಡಿ ವಿಲಿಯರ್ಸ್ ಅರ್ಧಶತಕ ಹಾಗೂ ಶಿವಬ್ ದುಬೆ ಬಾರಿಸಿದ 27 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು.