ಪಂಜಾಬ್ ವಿರುದ್ಧ 48 ರನ್ ಗಳಿಂದ ಗೆದ್ದ ಮುಂಬೈ: ರಾಹುಲ್ ಪಡೆಗೆ ಮೂರನೇ ಸೋಲು
ಅಬುಧಾಬಿ: ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ವೈಫಲ್ಯ ಅನುಭವಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 48 ರನ್ ಗಳಿಂದ ಸೋತಿದ್ದು, ಒಟ್ಟು ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋಲಿಗೆ ಶರಣಾಗಿದೆ.
ಗೆಲುವಿಗೆ 192 ರನ್ ಗುರಿ ಪಡೆದ ಪಂಜಾಬ್ ತಂಡವು ಉತ್ತಮ ಆರಂಭ ಪಡೆಯಿತಾದರೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಪಂಜಾಬ್ ಪರ ನಿಕೋಲಸ್ ಪೂರನ್ 27 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ಮೂಲಕ 44 ರನ್ ಸಿಡಿಸಿದರು. ಮಯಾಂಕ್ ಅಗರವಾಲ್ 25, ಕೃಷ್ಣಪ್ಪ ಗೌತಮ್ 22, ಕೆ.ಎಲ್ ರಾಹುಲ್ 17 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ, ರಾಹುಲ್ ಚಾಹರ್, ಜೇಮ್ಸ್ ಪ್ಯಾಟಿನ್ಸನ್ ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
ಆರಂಭಿಕ ಆಟಗಾರ ರೋಹಿತ್ ಶರ್ಮಾ 45 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 8 ಬೌಂಡರಿ ಮೂಲಕ 70 ರನ್ ಸಿಡಿಸಿದರು. ಇಶಾನ್ ಕಿಶಾನ್ 28, ಕೀರನ್ ಪೊಲಾರ್ಡ್ 47, ಹಾರ್ದಿಕ್ ಪಾಂಡ್ಯ 30 ರನ್ ಬಾರಿಸಿದರು.
ಪಂಜಾಬ್ ಪರ ಶೆಲ್ಡನ್ ಕಾಟ್ರೆಲ್, ಮುಹಮ್ಮದ್ ಶಮಿ ಕೃಷ್ಣಪ್ಪ ಗೌತಮ್ ತಲಾ ಒಂದು ವಿಕೆಟ್ ಪಡೆದರು.