ಐಪಿಎಲ್: ಪ್ಲೇ ಆಫ್ಗೇರಲು ಚೆನ್ನೈಗೆ ಇನ್ನೂ ಇದೆಯೇ ಅವಕಾಶ?
ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಪಂದ್ಯಾವಳಿಯು ಕುತೂಹಲ ಘಟ್ಟಕ್ಕೆ ತಲುಪಿದೆ. ಪ್ಲೇಆಫ್ಗೇರಲು ಎಲ್ಲ ತಂಡಗಳಿಗೂ ಮುಂದಿನ ಪಂದ್ಯಗಳು ನಿರ್ಣಾಯಕವೆನಿಸಲಿದೆ. ಯಾವುದೇ ತಂಡವು ನಾಕೌಟ್ಗೆ ಇನ್ನೂ ಅರ್ಹತೆ ಪಡೆದಿಲ್ಲ. ಪ್ರತಿ ಬಾರಿಯೂ ಹಾಟ್ ಫೇವರಿಟ್ ಎನಿಸಿಕೊಳ್ಳುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಥಿತಿ ಶೋಚನೀಯವಾಗಿದೆ. ಆಡಿರುವ 10 ಪಂದ್ಯಗಳ ಪೈಕಿ 7 ಪಂದ್ಯಗಳಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ. ಗೆಲುವಿನ ಹಳಿಗೆ ಮರಳಲು ಹೆಣಗಾಡುತ್ತಿದೆ.
ಶುಕ್ರವಾರ ತನ್ನ 11ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ನ್ನು ಚೆನ್ನೈ ಸೂಪರ್ ಕಿಂಗ್ಸ್ ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಮುಂಬೈಗೆ ಸೋಲುಣಿಸಿ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದ ಚೆನ್ನೈ ತಂಡ ಆನಂತರ ದುರ್ಬಲಗೊಂಡಿದೆ.
ಚೆನ್ನೈ ತಂಡ ಚೊಚ್ಚಲ ಆವೃತ್ತಿಯಲ್ಲಿ (2008) ರನ್ನರ್ಸ್ ಅಪ್ ಸ್ಥಾನ ಪಡೆದಿತ್ತು. 2009- ಸೆಮಿಫೈನಲ್, 2010ರಲ್ಲಿ ಚಾಂಪಿಯನ್, 2011ರಲ್ಲಿ ಚಾಂಪಿಯನ್, 2012ರಲ್ಲಿ ರನ್ನರ್ಸ್ ಅಪ್, 2013ರಲ್ಲಿ ರನ್ನರ್ಸ್ ಅಪ್, 2014ರಲ್ಲಿ ಪ್ಲೇ ಆಫ್, 2015ರಲ್ಲಿ ರನ್ನರ್ಸ್ ಅಪ್, 2016 ಮತ್ತು 2017ನೇ ಆವೃತ್ತಿಯಲ್ಲಿ ನಿಷೇಧಕ್ಕೊಳಗಾಗಿತ್ತು. 2018ರಲ್ಲಿ ಚಾಂಪಿಯನ್ ಮತ್ತು 2019ರಲ್ಲಿ ರನ್ನರ್ಸ್ ಅಪ್ ಸ್ಥಾನ ಪಡೆದಿದೆ. ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ಪ್ಲೇ ಆಫ್ಗೇರುವ ಹಾದಿಯಲ್ಲಿವೆ. ಉಳಿದ ತಂಡಗಳಾದ ಕೋಲ್ಕತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ರಾಜಸ್ಥಾನ್ ರಾಯಲ್ಸ್, ಸನ್ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪ್ಲೇ ಆಫ್ ಹಾದಿ ಇನ್ನೂ ಮುಚ್ಚಿಲ್ಲ. ಮೂರು ಬಾರಿ ಚಾಂಪಿಯನ್ ಮತ್ತು ಯಾವಾಗಲೂ ಪ್ಲೇಆಫ್ನಲ್ಲಿ ಸ್ಥಾನ ಪಡೆದ ಏಕೈಕ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ಗೆ ಈ ಬಾರಿ ಯುಎಇಯಲ್ಲಿ ಅದೃಷ್ಟ ಕೈಕೊಟ್ಟಂತೆ ಕಾಣಿಸುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್: ಒಂದು ತಂಡ ಸಾಮಾನ್ಯವಾಗಿ 14 ಪಂದ್ಯಗಳಲ್ಲಿ 8 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಪ್ಲೇ ಆಫ್ಗೇರಲು ಸಾಧ್ಯವಾಗುತ್ತದೆ. ಡೆಲ್ಲಿ ಮುಂದಿನ ಹಂತಕ್ಕೆ ತಲುಪಲು ಹತ್ತಿರದಲ್ಲಿದೆ. 10 ಪಂದ್ಯಗಳ ಪೈಕಿ 7ರಲ್ಲಿ ಜಯಗಳಿಸಿದೆ. ಉಳಿದ ನಾಲ್ಕು ಪಂದ್ಯಗಳ ಪೈಕಿ ಇನ್ನೊಂದು ಪಂದ್ಯವನ್ನು ಜಯಿಸಿದರೆ ಸಾಕು.
ಆರ್ಸಿಬಿ : ಆರ್ಸಿಬಿ ಆಡಿರುವ 10 ಪಂದ್ಯಗಳ ಪೈಕಿ 7 ಪಂದ್ಯಗಳನ್ನು ಜಯಿಸಿ 14 ಅಂಕಗಳನ್ನು ಪಡೆದಿದೆ. ಪ್ಲೇಆಫ್ ಹಂತ ಪ್ರವೇಶಿಸಲು ಉಳಿದ ನಾಲ್ಕು ಪಂದ್ಯಗಳಿಂದ ಒಂದು ಗೆಲುವು ಬೇಕಾಗುತ್ತದೆ.
ಮುಂಬೈ ಇಂಡಿಯನ್ಸ್: ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಜಯಗಳಿಸಿದೆ. ಮುಂದಿನ ಹಂತ ತಲುಪಲು ಇನ್ನು ಎರಡು ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ.
ಕೋಲ್ಕತಾ ನೈಟ್ ರೈಡರ್ಸ್: ಕೆಕೆಆರ್ ತನ್ನ 10 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದೆ ಮತ್ತು ಉಳಿದ ನಾಲ್ಕು ಪಂದ್ಯಗಳಲ್ಲಿ ಇನ್ನೂ ಮೂರು ವಿಜಯ ಸಾಧಿಸಬೇಕಾಗಿದೆ. ಕೆಕೆಆರ್ನ ನೆಟ್ ರನ್ ರೇಟ್ -0.828 ಸಹ ಪಂದ್ಯಾವಳಿಯಲ್ಲಿ ಕೆಟ್ಟದ್ದಾಗಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್: ಕಿಂಗ್ಸ್ ಇಲೆವೆನ್ ಮರು ಹೋರಾಟದ ಹಾದಿಯಲ್ಲಿ ತನ್ನ ಕೊನೆಯ ಮೂರು ಪಂದ್ಯಗಳನ್ನು ಜಯಿಸಿದೆ. ಅಂಕಪಟ್ಟಿಯಲ್ಲಿ ಕೆಳಗಿನಿಂದ 5 ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಲು ಉಳಿದ ಎಲ್ಲಾ 4 ಪಂದ್ಯಗಳನ್ನು ಜಯಿಸಬೇಕಾಗಿದೆ. ರಾಜಸ್ಥಾನ್ ರಾಯಲ್ಸ್: ಆರ್ಆರ್ 10 ಪಂದ್ಯಗಳ ಪೈಕಿ 4 ಗೆಲುವು ಮತ್ತು 6 ಸೋಲುಗಳನ್ನು ಕಂಡಿದೆ. ಮುಂದೆ ಅರ್ಹತೆಯ ಅವಕಾಶವನ್ನು ಹೊಂದಲು ಕನಿಷ್ಠ ಮೂರು ಪಂದ್ಯಗಳನ್ನು ಗೆಲ್ಲಬೇಕಾಗಿದೆ.
ಸನ್ರೈಸರ್ಸ್ ಹೈದರಾಬಾದ್: 9 ಪಂದ್ಯಗಳಿಂದ 3 ಗೆಲುವಿನೊಂದಿಗೆ ಪಾಯಿಂಟ್ ಟೇಬಲ್ನಲ್ಲಿ 7 ನೇ ಸ್ಥಾನದಲ್ಲಿದೆ. ಉಳಿದ 5 ಪಂದ್ಯಗಳಲ್ಲಿ ಕನಿಷ್ಠ 4 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇದು ತುಂಬಾ ಕಷ್ಟದ ಕೆಲಸವಾಗಿದೆ. ಎಸ್ಆರ್ಎಚ್ಗೆ ಇರುವ ಏಕೈಕ ಪ್ಲಸ್ ಅವರ ನೆಟ್ ರನ್ ರೇಟ್ ಚೆನ್ನಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್: ಈ ಆವೃತ್ತಿಯಲ್ಲಿ ಇದುವರೆಗೆ 7 ಪಂದ್ಯಗಳನ್ನು ಕಳೆದುಕೊಂಡಿರುವ ಏಕೈಕ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ. ಸಿಎಸ್ಕೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಲು ಬಾಕಿ ಉಳಿದಿರುವ ಎಲ್ಲಾ 4 ಪಂದ್ಯಗಳನ್ನು ಗೆಲ್ಲಬೇಕಾಗಿದೆ.