ಚೆನ್ನೈ ತಂಡದಲ್ಲಿ ಇದು ನಿಮ್ಮ ಕೊನೆಯ ಪಂದ್ಯವೇ ಎಂಬ ಪ್ರಶ್ನೆಗೆ ಧೋನಿಯ ಪ್ರತಿಕ್ರಿಯೆ ಏನಿತ್ತು ಗೊತ್ತಾ?
ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ಚೆನ್ನೈ ಫ್ರಾಂಚೈಸಿಯೊಂದಿಗೆ ತನ್ನ ಭವಿಷ್ಯದ ಕುರಿತು ಇದ್ದ ಸಂಶಯವನ್ನು ನಿವಾರಿಸಿದ್ದಾರೆ. ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಏನು ಕೇಳಲು ಬಯಸಿದ್ದರೋ ಅದನ್ನೇ ಅವರು ಹೇಳಿದ್ದಾರೆ.
ಚೆನ್ನೈ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ರವಿವಾರ ನಡೆದ ಐಪಿಎಲ್ ಪಂದ್ಯದ ಟಾಸ್ ವೇಳೆ ನ್ಯೂಝಿಲ್ಯಾಂಡ್ ನ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಡ್ಯಾನಿ ಮೊರಿಸನ್ ಅವರು ಚೆನ್ನೈ ನಾಯಕ ಧೋನಿಗೆ, ಹಳದಿ ಬಣ್ಣದ ಜರ್ಸಿ(ಚೆನ್ನೈ ತಂಡದ ಜರ್ಸಿ)ಯೊಂದಿಗೆ ನೀವು ಆಡುತ್ತಿರುವ ಕೊನೆಯ ಪಂದ್ಯ ಇದಾಗಿದೆಯೇ? ಎಂದು ಕೇಳಿದರು.
ತಕ್ಷಣವೇ ಪ್ರತಿಕ್ರಿಯಿಸಿದ ಧೋನಿ, ‘’ಖಂಡಿತವಾಗಿಯೂ ಇಲ್ಲ’’ ಎಂದು ಎರಡೇ ಪದದಲ್ಲಿ ದೃಢವಾದ ಉತ್ತರ ನೀಡಿದರು.
ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಪ್ಲೇ ಆಫ್ ಸುತ್ತಿಗೇರಲು ವಿಫಲವಾಗಿದೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿ ಧೋನಿ ನೇತೃತ್ವದ ಚೆನ್ನೈ ತಂಡ ಪ್ಲೇ ಆಫ್ ನಿಂದ ಹೊರಗುಳಿದಿದೆ.
ಈ ವರ್ಷದ ಐಪಿಎಲ್ ನಲ್ಲಿ ಚೆನ್ನೈ ಆಡಲಿರುವ ಕೊನೆಯ ಲೀಗ್ ಪಂದ್ಯವು ಧೋನಿಯ ವಿದಾಯದ ಪಂದ್ಯವಾಗಲಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಮಾಜಿ ನಾಯಕ ಧೋನಿ ಆ ರೀತಿಯ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಮೊರಿಸನ್ ಪ್ರಶ್ನೆಗೆ ಧೋನಿ ನೀಡಿದ್ದ ಉತ್ತರಕ್ಕೆ ಅಭಿಮಾನಿಗಳು ಟ್ವಿಟರ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
"ಧೋನಿ ಉತ್ತರ ಟ್ರೆಂಡ್ ಆಗಿದೆ. ಧೋನಿಗಿಂತ ದೊಡ್ಡ ಬ್ರ್ಯಾಂಡ್ ಬೇರೆ ಇಲ್ಲ'' ಎಂದು ಅಭಿಮಾನಿಯೋರ್ವ ಟ್ವೀಟಿಸಿದ್ದಾನೆ.