ಬುಮ್ರಾಗೆ ಮೊದಲ ಸ್ಪೆಲ್ನಲ್ಲಿ ಕೊಹ್ಲಿ ಕೇವಲ 2 ಓವರ್ ನೀಡಿದ್ದು ಸರಿಯಲ್ಲ: ಗಂಭೀರ್
ಹೊಸದಿಲ್ಲಿ, ನ.30: ಸಿಡ್ನಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಪ್ರಧಾನ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಮೊದಲ ಸ್ಪೆಲ್ನಲ್ಲಿ ಕೇವಲ ಎರಡು ಓವರ್ನೀಡುವ ಮೂಲಕ ನಾಯಕ ವಿರಾಟ್ ಕೊಹ್ಲಿ ಯಾವ ನಾಯಕನೂ ಮಾಡದ ಪ್ರಮಾದವನ್ನು ಮಾಡಿದ್ದಾರೆ. ಎಂದು ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ನಾಯಕನಾಗಿ ಕೊಹ್ಲಿ ರಣತಂತ್ರವನ್ನು ಟೀಕಿಸಿರುವ ಗಂಭೀರ್ ಇದುವರೆಗಿನ ಎರಡು ತಂಡಗಳ ನಡುವಿನ ವ್ಯತ್ಯಾಸವೆಂದರೆ ಆಸ್ಟ್ರೇಲಿಯದ ನಾಯಕ ಆ್ಯರನ್ ಫಿಂಚ್ ತನ್ನ ಅತ್ಯಂತ ಯಶಸ್ವಿ ವೇಗಿ ಜೋಶ್ ಹೇಝಲ್ವುಡ್ರನ್ನು ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಸರಿಯಾಗಿ ಬಳಿಸಿಕೊಂಡಿದ್ದಾರೆ. ಇದರಿಂದಾಗಿ ಆತಿಥೇಯರು ಸುಲಭವಾಗಿ ಜಯಿಸಿದ್ದಾರೆ ಎಂದು ಹೇಳಿದರು.
ಉತ್ತಮ ಫಾರ್ಮ್ ನಲ್ಲಿರುವ ಆಸ್ಟ್ರೇಲಿಯದ ಅಗ್ರ ಸರದಿಯ ಮೂವರು ಬ್ಯಾಟ್ಸ್ಮನ್ಗಳಾದ ಆ್ಯರನ್ ಫಿಂಚ್, ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಒಂದೇ ಸಮಯದಲ್ಲಿ ಕಟ್ಟಿ ಹಾಕುವ ಸಾಮರ್ಥ್ಯ ಬುಮ್ರಾರಿಗೆ ಇದ್ದರೂ, ಕೊಹ್ಲಿ ಆ ನಿಟ್ಟಿನಲ್ಲಿ ಗಮನ ಹರಿಸಲಿಲ್ಲ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
‘‘ಕೊಹ್ಲಿ ಮತ್ತು ಸ್ಮಿತ್ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ನಾನು ಭಾವಿಸುವುದಿಲ್ಲ. ಅಂಕೆ ಸಂಖ್ಯೆಗಳ ಪ್ರಕಾರ ಹೋದರೆ, ಕೊಹ್ಲಿ ಯಾವಾಗಲೂ ಸ್ಮಿತ್ಗಿಂತ ಉತ್ತಮ ಸಂಖ್ಯೆಗಳನ್ನು ನೀಡುತ್ತಾರೆ. ಆದರೆ ಸ್ಮಿತ್ ದಾಖಲೆಯನ್ನು ನೋಡಿದರೆ ಹಿಂದಿನ ಐದು ಅಥವಾ ಏಳು ಏಕದಿನ ಪಂದ್ಯಗಳಲ್ಲಿ ಅವರು 3 ಶತಕಗಳನ್ನು ಗಳಿಸಿದ್ದಾರೆ. ಆದ್ದರಿಂದ ವ್ಯತ್ಯಾಸವು ಹೆಚ್ಚು ಇಲ್ಲ’’ ಎಂದರು. ‘‘ ಸ್ಟೀವ್ ಸ್ಮಿತ್ ಅವರು ಶತಕ ದಾಖಲಿಸಿದ್ದಾರೆ. ನಿಸ್ಸಂಶಯವಾಗಿ ಸಂಖ್ಯೆಗಳ ಪ್ರಕಾರ ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ ಶ್ರೇಷ್ಠ ಆಟಗಾರ. ಆದರೆ ಸ್ಮಿತ್ ಮತ್ತು ಕೊಹ್ಲಿ ನಡುವೆ ಹೆಚ್ಚಿ ನ ವ್ಯತ್ಯಾಸವಿಲ್ಲ’’ ಎಂದು ಗಂಭೀರ್ ಹೇಳಿದರು.