ನಾಲ್ವರು ಬಾಕ್ಸರ್ಗಳು ಟಾಪ್ಸ್ ಗೆ ಸೇರ್ಪಡೆ
ಹೊಸದಿಲ್ಲಿ, ನ.30: ಇತ್ತೀಚೆಗೆ ನಡೆದ 50ನೇ ಮಿಷನ್ ಒಲಿಂಪಿಕ್ ಸೆಲ್ (ಎಂಒಸಿ) ಸಭೆಯಲ್ಲಿ 2018ರ ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತೆ ಸಿಮ್ರಾಂಜಿತ್ ಕೌರ್ (60 ಕೆ.ಜಿ.) ಸೇರಿದಂತೆ ಟೋಕಿಯೊ ಒಲಿಂಪಿಕ್ಗೆ ಆಯ್ಕೆಯಾಗಿರುವ ನಾಲ್ವರು ಬಾಕ್ಸರ್ಗಳನ್ನು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ಗೆ (ಟಾಪ್ಸ್) ಸೇರಿಸಿ ಕೊಳ್ಳಲಾಗಿದೆ.
ಆಶಿಶ್ ಕುಮಾರ್ (75 ಕೆ.ಜಿ.), ಸತೀಶ್ ಕುಮಾರ್ (91+ ಕೆ.ಜಿ.) ಮತ್ತು ಮಹಿಳಾ ಬಾಕ್ಸರ್ ಪೂಜಾ ರಾಣಿ (75 ಕೆ.ಜಿ.) ಈ ಯೋಜನೆಗೆ ಸೇರ್ಪಡೆ ಗೊಂಡಿದ್ದಾರೆ. ಈ ವರ್ಷದ ಮಾರ್ಚ್ ನಲ್ಲಿ ಜೋರ್ಡಾನ್ನ ಅಮ್ಮನ್ನಲ್ಲಿ ನಡೆದ ಏಶ್ಯನ್ ಬಾಕ್ಸಿಂಗ್ ಅರ್ಹತಾ ಪಂದ್ಯಗಳಲ್ಲಿ ಎಲ್ಲಾ ನಾಲ್ಕು ಬಾಕ್ಸರ್ಗಳು ಒಲಿಂಪಿಕ್ ಕೋಟಾಗಳನ್ನು ಗೆದ್ದಿದ್ದಾರೆ.
2012ರ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತೆ ಮತ್ತು ಆರು ಬಾರಿ ವಿಶ್ವ ಚಾಂಪಿಯನ್, ಎಂ.ಸಿ .ಮೇರಿ ಕೋಮ್ ಮಹಿಳೆಯರ 51 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ಷಮತೆಯ ಪರಿಶೀಲನೆಯ ನಂತರ ಟಾಪ್ಸ್ ನಲ್ಲಿ ಉಳಿಸಿಕೊಂಡ ಆರು ಬಾಕ್ಸರ್ಗಳಲ್ಲಿ ಮೇರಿ ಕೋಮ್ ಒಬ್ಬರು. ಈ ಯೋಜನೆಯಲ್ಲಿ ಅವಕಾಶ ಉಳಿಸಿಕೊಂಡಿರುವ ಇತರ ಬಾಕ್ಸರ್ಗಳಲ್ಲಿ ಕವಿಂದರ್ ಸಿಂಗ್ ಬಿಶ್ತ್, ಅಮಿತ್ ಪಾಂಗಲ್, ಮನೀಶ್ ಕೌಶಿಕ್, ವಿಕಾಸ್ ಕ್ರಿಶನ್ ಮತ್ತು ಲೋವ್ಲಿನಾ ಬೊರ್ಗೊಹೈನ್ ಸೇರಿದ್ದಾರೆ.
ಕೋರ್ ಗುಂಪಿನಿಂದ ಮಹಿಳಾ ಬಾಕ್ಸರ್ಗಳಾದ ನಿಖಾತ್ ಝರೀನ್ (51 ಕೆ.ಜಿ.) ಮತ್ತು ಸೋನಿಯಾ ಚಾಹಲ್ (57 ಕೆ.ಜಿ.), ಶಿವ ಥಾಪಾ (ಪುರುಷರ 63 ಕೆ.ಜಿ.) ಟಾಪ್ಸ್ ಅಭಿವೃದ್ಧಿ ಗುಂಪಿಗೆ ವರ್ಗಾವಣೆಗೊಂಡಿದ್ದಾರೆ. ಒಲಿಂಪಿಕ್ ಕೋಟಾ ಗೆದ್ದ ಮೇರಿ ಕೋಮ್ ಅವರಂತೆಯೇ ಅದೇ ತೂಕ ವಿಭಾಗದಲ್ಲಿ ಝರೀನ್ ಭಾಗವಹಿಸಿದರೆ, ಥಾಪಾ ಕೂಡ ಆ ವಿಭಾಗದಲ್ಲಿ ಭಾಗವಹಿಸುತ್ತಾರೆ. ಮನೀಶ್ ಕೌಶಿಕ್ ಸಹ ಕೋಟಾ ಗಿಟ್ಟಿಸಿಕೊಂಡಿದ್ದಾರೆ.