ಕ್ರೀಡಾಸ್ಫೂರ್ತಿ ಮೆರೆದ ವಿಲಿಯಮ್ಸನ್
ಹ್ಯಾಮಿಲ್ಟನ್, ಡಿ.3: ಕ್ರಿಕೆಟ್ ಸ್ಫೂರ್ತಿಗೆ ಕೇನ್ ವಿಲಿಯಮ್ಸನ್ಗಿಂತ ಬೇರೆ ಉತ್ತಮ ರಾಯಭಾರಿ ಇಲ್ಲವೇ ಇಲ್ಲ. ವೆಸ್ಟ್ಇಂಡೀಸ್ ಕ್ರಿಕೆಟಿಗ ಕೇಮರ್ ರೋಚ್ ಅವರೊಂದಿಗೆ ನ್ಯೂಝಿಲ್ಯಾಂಡ್ ನಾಯಕ ವಿಲಿಯಮ್ಸನ್ ನಡೆದುಕೊಂಡ ರೀತಿಯು ಆಧುನಿಕ ಕ್ರಿಕೆಟಿಗರಿಗೆ ಅವರೇಕೆ ರೋಲ್ ಮಾಡಲ್ ಆಗಿದ್ದಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ನ್ಯೂಝಿಲ್ಯಾಂಡ್ ವಿರುದ್ಧ ಹ್ಯಾಮಿಲ್ಟನ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ರೋಚ್ ತಯಾರಿ ನಡೆಸುತ್ತಿದ್ದಾಗ ಅವರ ತಂದೆ ಆ್ಯಂಡ್ರೂ ಸ್ಮಿತ್ ನಿಧನರಾಗಿರುವ ಸುದ್ದಿ ಅವರನ್ನು ದಂಗುಬಡಿಸಿದೆ.
ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ವಿಲಿಯಮ್ಸನ್, ರೋಚ್ ಅವರನ್ನು ಆಲಿಂಗಿಸಿಕೊಂಡು ಸಮಾಧಾನಪಡಿಸುತ್ತಿರುವ ಚಿತ್ರವನ್ನು ವೆಸ್ಟ್ಇಂಡೀಸ್ ಕ್ರಿಕೆಟ್ ಟ್ವೀಟ್ ಮಾಡಿದೆ. ಈ ಚಿತ್ರವು ಅಂತರ್ಜಾಲದಲ್ಲಿ ಎಲ್ಲರ ಹೃದಯ ಗೆದ್ದಿದೆ.
ಸಿಡಬ್ಲುಐ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಪರವಾಗಿ ರೋಚ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಸಂತಾಪ ವ್ಯಕ್ತಪಡಿಸುತ್ತೇವೆ. ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖ ಸಹಿಸುವುದು ಸುಲಭವಲ್ಲ. ಇಂತಹ ಕಷ್ಟದ ಸಮಯದಲ್ಲಿ ನಾವು ರೋಚ್ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ವೆಸ್ಟ್ಇಂಡೀಸ್ ಟೀಮ್ ಮ್ಯಾನೇಜರ್ ರಾವ್ಲ್ ಲೂವಿಸ್ ಹೇಳಿದ್ದಾರೆ. ರೋಚ್ ಅವರ ತಂದೆಯ ನಿಧನದ ಸ್ಮರಣಾರ್ಥ ನ್ಯೂಝಿಲ್ಯಾಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮೊದಲ ಟೆಸ್ಟ್ನ ಮೊದಲ ದಿನ ಕಪ್ಪುಕೈ ಪಟ್ಟಿಯನ್ನು ಧರಿಸಿ ಆಡಿದವು.