2ನೇ ಟ್ವೆಂಟಿ-20: ವಿರಾಟ್ ಕೊಹ್ಲಿ ಪಡೆಗೆ 6 ವಿಕೆಟ್ ಗಳ ಜಯ, ಸರಣಿ ಕೈವಶ
ಧವನ್ ಅರ್ಧಶತಕ, ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ
ಸಿಡ್ನಿ: ಆರಂಭಿಕ ಆಟಗಾರ ಶಿಖರ್ ಧವನ್ (52, 36 ಎಸೆತ, 4 ಬೌಂಡರಿ, 2 ಸಿಕ್ಸರ್)ಹಾಗೂ ರಾಹುಲ್(30, 2 ಬೌಂಡರಿ,1 ಸಿಕ್ಸರ್ ) ಉತ್ತಮ ಆರಂಭ, ಹಾರ್ದಿಕ್ ಪಾಂಡ್ಯ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯವನ್ನು ಆರು ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಗೆದ್ದುಕೊಂಡಿದೆ.
ಗೆಲ್ಲಲು 195 ರನ್ ಗುರಿ ಬೆನ್ನಟ್ಟಿದ ಭಾರತಕ್ಕೆ ಕೊನೆಯ ಓವರ್ ನಲ್ಲಿ ಗೆಲುವಿಗೆ 14 ರನ್ ಅಗತ್ಯವಿತ್ತು. ಸ್ಯಾಮ್ಸ್ ಬೌಲಿಂಗ್ ನಲ್ಲಿ ಎರಡು ಸಿಕ್ಸರ್ ಗಳನ್ನು ಸಿಡಿಸಿರುವ ಹಾರ್ದಿಕ್ ಪಾಂಡ್ಯ ಭಾರತವು 19.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆಲುವಿನ ರನ್ ಗಳಿಸಲು ನೆರವಾದರು. ಮೊದಲ ವಿಕೆಟ್ ಗೆ 56 ರನ್ ಸೇರಿಸಿದ ಧವನ್ ಹಾಗೂ ರಾಹುಲ್ ಉತ್ತಮ ಆರಂಭ ಒದಗಿಸಿದರು.
ಕೇವಲ 22 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಗಳ ಸಹಿತ 42 ರನ್ ಗಳಿಸಿದ ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಭಾರತದ ಪರ ನಾಯಕ ವಿರಾಟ್ ಕೊಹ್ಲಿ 40 ರನ್ (24 ಎಸೆತ, 2 ಬೌಂಡರಿ, 2 ಸಿಕ್ಸರ್ )ಕೊಡುಗೆ ನೀಡಿದರು.