ಆರಂಭಿಕ ಬ್ಯಾಟ್ಸಮನ್ ಜಾಗಕ್ಕೊ ಸೈ: ಸುಂದರ್
ಹೊಸದಿಲ್ಲಿ, ಜ.24: ಯಾವುದೇ ಸವಾಲನ್ನು ಎದುರಿಸಲು ತಯಾರಾಗಿರುವ ಯುವ ಆಲ್ರೌಂಡರ್ ವಾಶಿಂಗ್ಟನ್ ಸುಂದರ್ ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್ಮನ್ ಆಗಿ ಇನಿಂಗ್ಸ್ ಆರಂಭಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ.
21ರ ಹರೆಯದ ವಾಶಿಂಗ್ಟನ್ ಸುಂದರ್ ಭಾರತದ ಅಂಡರ್ -19 ತಂಡದಲ್ಲಿ ಸ್ಪೆಷಲಿಸ್ಟ್ ಟಾಪ್-ಆರ್ಡರ್ ಬ್ಯಾಟ್ಸ್ಮನ್ ಆಗಿದ್ದರು. ಆದರೆ ನಂತರ ಅವರ ಆಫ್-ಸ್ಪಿನ್ನರ್ ಆಗಿ ಯಶಸ್ಸು ಪಡೆದರು. ಇದೀಗ ಅವರು ಭಾರತದ ಟ್ವೆಂಟಿ-20 ತಂಡದಲ್ಲಿ ಅರ್ಹವಾಗಿಯೇ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯವಾಗಿರುವ ಬ್ರಿಸ್ಬೇನ್ ಟೆಸ್ಟ್ ನಲ್ಲಿ ಭಾರತದ ವಿಜಯದ ವೀರರಲ್ಲಿ ಒಬ್ಬರಾಗಿರುವ ವಾಶಿಂಗ್ಟನ್ ಮುಖ್ಯ ಕೋಚ್ ತಮ್ಮ ಮೇಲೆ ಬೀರಿರುವ ಪ್ರಭಾವದ ಬಗ್ಗೆ ಮಾತನಾಡಿದರು.
‘‘ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಬ್ಯಾಟಿಂಗ್ ತೆರೆಯಲು ನನಗೆ ಎಂದಾದರೂ ಅವಕಾಶ ಸಿಕ್ಕಿದರೆ ಅದು ನನಗೆ ಆಶೀರ್ವಾದ ಎಂದು ನಾನು ಭಾವಿಸುತ್ತೇನೆ. ನಮ್ಮ ಕೋಚ್ ರವಿ ಸರ್ ಅವರ ಆಟದ ದಿನಗಳಲ್ಲಿ ಮಾಡಿದಂತೆಯೇ ನಾನು ಸವಾಲನ್ನು ಸ್ವೀಕರಿಸುತ್ತೇನೆ ’’ಎಂದು ವಾಶಿಂಗ್ಟನ್ ಸುಂದರ್ ತಿಳಿಸಿದರು. ಸುಂದರ್ ಚೆನ್ನೈನ ತಮ್ಮ ನಿವಾಸದಲ್ಲಿ ಸುದ್ದಿ ಸಂಸ್ಥೆಯೊಂದರ ಪ್ರತಿನಿಧಿ ಜೊತೆ ಮಾತನಾಡಿದರು.
ಬ್ರಿಸ್ಬೇನ್ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 62 ರನ್ ಗಳಿಸಿ ಭಾರತದ ಹೋರಾಟವನ್ನು ಜೀವಂತವಾಗಿರಿಸಿದ್ದರು. ಎರಡನೇ ಇನಿಂಗ್ಸ್ನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರ ಓವರ್ನಲ್ಲಿ ಒಂದು ಸಿಕ್ಸರ್ ಸೇರಿದಂತೆ 22 ರನ್ ಗಳಿಸಿದರು. ನಾಲ್ಕು ವಿಕೆಟ್ಗಳನ್ನು ಪಡೆದಿದ್ದರು.
‘‘ನಿಸ್ಸಂಶಯವಾಗಿಯೂ ಬ್ರಿಸ್ಬೇನ್ನಲ್ಲಿ ಮೊದಲ ದಿನ, ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ಪೂರಕವಾಗಿರಲಿಲ್ಲ. ಹೀಗಿದ್ದರೂ, ಸ್ಟೀವ್ ಸ್ಮಿತ್ರನ್ನು ಔಟು ಮಾಡುವ ಮೂಲಕ ನನ್ನ ಮೊದಲ ಟೆಸ್ಟ್ ವಿಕೆಟ್ ಪಡೆಯುವ ಕನಸು ನನಸಾಯಿತು’’ ಎಂದು ಅವರು ಹೇಳಿದರು.