ಇತಿಹಾಸ ನಿರ್ಮಿಸುವತ್ತ ಸೆರೆನಾ, ನಡಾಲ್ ಚಿತ್ತ
ಇಂದಿನಿಂದ ಆಸ್ಟ್ರೇಲಿಯನ್ ಓಪನ್
ಮೆಲ್ಬೋರ್ನ್ : ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಟೂರ್ನಿ ಆಸ್ಟ್ರೇಲಿಯ ಓಪನ್ಗೆ ಸೋಮವಾರ ಚಾಲನೆ ದೊರೆಯಲಿದ್ದು, ವಿಶ್ವ ಟೆನಿಸ್ ನ ಪ್ರಮುಖ ಆಟಗಾರರಾದ ರಫೆಲ್ ನಡಾಲ್, ನೊವಾಕ್ ಜೊಕೊವಿಕ್ ಹಾಗೂ ಸೆರೆನಾ ವಿಲಿಯಮ್ಸ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ತಾರೆಯರು ಈ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ.
ಸ್ಪೇನ್ ಆಟಗಾರ ನಡಾಲ್ ಆಸ್ಟ್ರೇಲಿಯನ್ ಓಪನ್ನಲ್ಲಿ ಟ್ರೋಫಿ ಜಯಿಸಿದರೆ ಪುರುಷರ ವಿಭಾಗದಲ್ಲಿ ಅತ್ಯಂತ ಹೆಚ್ಚು ಗ್ರ್ಯಾನ್ ಸ್ಲಾಮ್ ಗೆದ್ದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸ್ವಿಟ್ಸರ್ಲ್ಯಾಂಡ್ ನ ರೋಜರ್ ಫೆಡರರ್ ಹಾಗೂ ನಡಾಲ್ ಇದುವರೆಗೆ ತಲಾ 20 ಗ್ರ್ಯಾನ್ ಸ್ಲಾಮ್ ಟ್ರೋಫಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಮೊಣಕಾಲು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಫೆಡರರ್ ಮೆಲ್ಬೋರ್ನ್ ನಲ್ಲಿ ಕಣಕ್ಕಿಳಿಯುತ್ತಿಲ್ಲ. ಹೀಗಾಗಿ ನಡಾಲ್ ಗೆ ಅವರ ದಾಖಲೆ ಮೀರಿಸುವ ಅವಕಾಶ ಇದೆ.
ನಡಾಲ್ ಕೂಡ ಕಳೆದ ಎರಡು ವಾರಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಇತ್ತೀಚೆಗೆ ನಡೆದಿದ್ದ ಎಟಿಪಿ ಟೂರ್ನಿಯಲ್ಲಿ ಆಡಿರಲಿಲ್ಲ. ಆದರೂ ಪರಿಸ್ಥಿತಿ ಸುಧಾರಿಸುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.
ಮಂಗಳವಾರ ಮೊದಲ ಸುತ್ತಿನ ಪಂದ್ಯ ವನ್ನಾಡುತ್ತಿರುವ ನಡಾಲ್ ಅವರಿಗೆ ಸರ್ಬಿಯಾದ ಲಾಸ್ಲೊ ಡಿಜೇರ್ ಸವಾಲು ಎದುರಾಗಿದೆ.