ರೋಹಿತ್ ಶರ್ಮಾಗೆ 8ನೇ ಸ್ಥಾನ
ದುಬೈ:ಐಸಿಸಿ ಟೆಸ್ಟ್ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ನಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು ನಂ.8ನೇ ಸ್ಥಾನ ತಲುಪಿದ್ದಾರೆ.
ಅಹಮದಾಬಾದ್ನಲ್ಲಿ ನಡೆದ ಮೂರನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 10 ವಿಕೆಟ್ಗಳ ಜಯ ಸಾಧಿಸಿತ್ತು. ಈ ಟೆಸ್ಟ್ನಲ್ಲಿ ನೀಡಿರುವ ಪ್ರದರ್ಶನದ ಫಲವಾಗಿ ಓಪನರ್ ರೋಹಿತ್ ಶರ್ಮಾ ಐಸಿಸಿ ಟೆಸ್ಟ್ ಬ್ಯಾಟ್ಸ್ಮನ್ಸ್ ಶ್ರೇಯಾಂಕದಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಎಂಟನೇ ಸ್ಥಾನವನ್ನು ತಲುಪಿದ್ದಾರೆ.
ಮೂರನೇ ಟೆಸ್ಟ್ನಲ್ಲಿ ರೋಹಿತ್ ಮೊದಲ ಇನಿಂಗ್ಸ್ ನಲ್ಲಿ 66 ರನ್ ಗಳಿಸಿ ಭಾರತದ ಪರ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು. ಎರಡನೇ ಇನಿಂಗ್ಸ್ನಲ್ಲಿ ಔಟಾಗದೆ 25 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಚೇತೇಶ್ವರ ಪೂಜಾರ 10ನೇ ಸ್ಥಾನ ಪಡೆದಿದ್ದಾರೆ.
ಟೆಸ್ಟ್ ಬೌಲರ್ಗಳ ರ್ಯಾಂಕಿಂಗ್ನಲ್ಲಿ ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಗ್ರ ಮೂರು ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಜೇಮ್ಸ್ ಆ್ಯಂಡರ್ಸನ್ ನಂ .6 , ಸ್ಟುವರ್ಟ್ ಬ್ರಾಡ್ 7ನೇ ಮತ್ತು ಜಸ್ಪ್ರೀತ್ ಬುಮ್ರಾ 9ನೇ ಸ್ಥಾನಕ್ಕೆ ಹಿಂಭಡ್ತಿ ಪಡೆದಿದ್ದಾರೆ.
ಮೂರನೇ ಟೆಸ್ಟ್ನಲ್ಲಿ ಸ್ಪಿನ್ನರ್ಗಳ ಸ್ನೇಹಿ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತದ ಗೆಲುವಿನ ರೂವಾರಿಗಳಾದ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಉತ್ತಮ ಪ್ರದರ್ಶನ ನೀಡಿದ್ದರು.
ಕಳೆದ ಟೆಸ್ಟ್ನಲ್ಲಿ ಎಡಗೈ ಸ್ಪಿನ್ನರ್ ಪಟೇಲ್ 11 ವಿಕೆಟ್ಗಳನ್ನು ಪಡೆದು ರ್ಯಾಂಕಿಂಗ್ನಲ್ಲಿ 38ನೇ ಸ್ಥಾನವನ್ನು ತಲುಪಿದ್ದರು. ಅವರು ಟೆಸ್ಟ್ನಲ್ಲಿ ನೀಡಿರುವ ಪ್ರದರ್ಶನವು 30 ಸ್ಥಾನಗಳ ಭಡ್ತಿ ಪಡೆಯಲು ನೆರವಾಗಿದೆ. ಆಫ್ ಸ್ಪಿನ್ನರ್ ಅಶ್ವಿನ್ ಏಳು ವಿಕೆಟ್ಗಳನ್ನು ಪಡೆದಿದ್ದರು. ಇದರಿಂದಾಗಿ ನಾಲ್ಕು ಸ್ಥಾನಗಳ ಭಡ್ತಿ ಪಡೆದು ರ್ಯಾಂಕಿಂಗ್ನಲ್ಲಿ 3ನೇ ಸ್ಥಾನ ತಲುಪಿದ್ದಾರೆ.
ಇಂಗ್ಲೆಂಡ್ ಸ್ಪಿನ್ನರ್ ಜಾಕ್ ಲೀಚ್ ಮೊದಲ ಬಾರಿಗೆ ಅಗ್ರ 30ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನಾಲ್ಕು ವಿಕೆಟ್ ಪಡೆದ ನಂತರ ಮೂರು ಸ್ಥಾನಗಳ ಭಡ್ತಿ ಪಡೆದು 28 ನೇ ಸ್ಥಾನಕ್ಕೆ ಏರಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಮೊದಲ ಬಾರಿ ಐದು ವಿಕೆಟ್ಗಳನ್ನು ಪಡೆದಿದ್ದರು. ಇದರಿಂದಾಗಿ ಬೌಲರ್ಗಳ ರ್ಯಾಂಕಿಂಗ್ನಲ್ಲಿ 16 ಸ್ಥಾನಗಳ ಭಡ್ತಿ ಪಡೆದು 72ನೇ ಸ್ಥಾನಕ್ಕೆ ತಲುಪಿದ್ದಾರೆ.ಆಲ್ರೌಂಡರ್ಗಳ ಪಟ್ಟಿಯಲ್ಲಿ ನ್ಯೂಝಿಲ್ಯಾಂಡ್ನ ಟಿಮ್ ಸೌಥಿ ಅವರೊಂದಿಗೆ ಜಂಟಿ 13ನೇಸ್ಥಾನದಲ್ಲಿದ್ದಾರೆ.
ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ನ ಓಪನರ್ ಜಾಕ್ ಕ್ರಾಲೆ 53 ರನ್ ಗಳಿಸಿದ್ದರು. ಇದರ ನೆರವಿನಲ್ಲಿ 15 ಸ್ಥಾನಗಳ ಭಡ್ತಿ ಪಡೆದು 46ನೇ ಸ್ಥಾನಕ್ಕೆ ತಲುಪಿದ್ದಾರೆ.
ಟೆಸ್ಟ್ ಬ್ಯಾಟ್ಸ್ ಮನ್ಗಳ ರ್ಯಾಂಕಿಂಗ್
ಹೆಸರು ರ್ಯಾಂಕಿಂಗ್
ವಿರಾಟ್ ಕೊಹ್ಲಿ 5
ರೋಹಿತ್ ಶರ್ಮಾ 8
ಚೇತೇಶ್ವರ ಪೂಜಾರ 10
ಅಜಿಂಕ್ಯ ರಹಾನೆ 13
ರಿಷಭ್ ಪಂತ್ 14