ಭಾರತದ ಗೆಲುವು ಕಸಿದ ಜೋಸ್ ಬಟ್ಲರ್: ಆಂಗ್ಲರಿಗೆ 8 ವಿಕೆಟ್ ಗಳ ಭರ್ಜರಿ ಜಯ, ಸರಣಿ ಮುನ್ನಡೆ
ಮೂರನೇ ಟಿ-20 ಪಂದ್ಯ
ಅಹಮದಾಬಾದ್, ಮಾ.16: ಅತಿಥೇಯ ಭಾರತದ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದ್ದು, ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ.
ಗೆಲುವಿಗೆ 157 ರನ್ ಗುರಿ ಪಡೆದ ಇಂಗ್ಲೆಂಡ್ 18.2 ಓವರ್ ಗಳಲ್ಲಿ ಗೆಲುವು ದಾಖಲಿಸಿತು. ಆರಂಭಿಕ ಆಟಗಾರ ಜೋಸ್ ಬಟ್ಲರ್ ಆಕರ್ಷಕ ಅರ್ಧಶತಕ ಸಿಡಿಸಿ ಭಾರತದ ಗೆಲುವಿನ ಆಸೆಗೆ ತಣ್ಣೀರೆರಚಿದರು. 52 ಎಸೆತಗಳಲ್ಲಿ 83 ರನ್ ಗಳಿಸಿದ ಬಟ್ಲರ್ ಔಟಾಗದೇ ಉಳಿದರು. ಉಳಿದಂತೆ ಜೇಸನ್ ರಾಯ್ 9, ಮಲನ್ 18, ಬೈರ್ ಸ್ಟೋ 40 ರನ್ ಗಳಿಸಿದರು.
ಭಾರತದ ಪರ ಚಾಹಲ್ ಹಾಗೂ ಸುಂದರ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು ಆರಂಭಿಕ ಆಘಾತಕ್ಕೆ ಒಳಗಾದರೂ ವಿರಾಟ್ ಕೊಹ್ಲಿಯ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ಗೆಲುವಿಗೆ 157 ರನ್ ಗುರಿ ನೀಡಿತ್ತು.
ಕೆ.ಎಲ್ ರಾಹುಲ್ ಶೂನ್ಯಕ್ಕೆ ಔಟಾಗಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ರೋಹಿತ್ ಶರ್ಮಾ 15, ಕಳೆದ ಪಂದ್ಯದ ಹೀರೋ ಇಶಾನ್ ಕಿಶಾನ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಿಷಬ್ ಪಂತ್ (25) ತಂಡವನ್ನು ಆಧರಿಸಿದರು. ಶ್ರೇಯಸ್ ಅಯ್ಯರ್ (9) ರನ್ ಗಳಿಸಲಷ್ಟೇ ಶಕ್ತವಾದರು. ಬಳಿಕ ಹಾರ್ದಿಕ್ ಪಾಂಡ್ಯ (17) ಜೊತೆ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ ನಡೆಸಿದರು. 46 ಎಸೆತಗಳಲ್ಲಿ 77 ರನ್ ಗಳಿಸಿದ ವಿರಾಟ್ ಕೊಹ್ಲಿ ಔಟಾಗದೇ ಉಳಿದರು. ಇಂಗ್ಲೆಂಡ್ ಪರ ಮಾರ್ಕ್ ವುಡ್ 3, ಜೋರ್ಡನ್ 2 ವಿಕೆಟ್ ಕಬಳಿಸಿದರು.