ನಾಲ್ಕನೇ ಟ್ವೆಂಟಿ-20: ಇಂಗ್ಲೆಂಡ್ ಗೆಲುವಿಗೆ 186 ರನ್ ಗುರಿ
ಸೂರ್ಯಕುಮಾರ್ ಯಾದವ್ ಅರ್ಧಶತಕ, ಆರ್ಚರ್ ಗೆ 4 ವಿಕೆಟ್
ಅಹಮದಾಬಾದ್: ಅಗ್ರ ಸರದಿಯ ಆಟಗಾರ ಸೂರ್ಯ ಕುಮಾರ್ ಯಾದವ್ ಅರ್ಧಶತಕದ(57, 31 ಎಸೆತ, 6 ಬೌಂಡರಿ, 3 ಸಿಕ್ಸರ್)ಕೊಡುಗೆಯ ನೆರವಿನಿಂದ ಭಾರತ ತಂಡ ನಾಲ್ಕನೇ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ 186 ರನ್ ಗುರಿ ನೀಡಿದೆ.
ಗುರುವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟ ಭಾರತವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ(12) ಹಾಗೂ ರಾಹುಲ್ (14)ಉತ್ತಮ ಆರಂಭ ಒದಗಿಸಲು ವಿಫಲರಾದರು. ನಾಯಕ ವಿರಾಟ್ ಕೊಹ್ಲಿ 5 ಎಸೆತ ಎದುರಿಸಿದರೂ ಕೇವಲ 1 ರನ್ ಗಳಿಸಿ ರಶೀದ್ ಗೆ ವಿಕೆಟ್ ಒಪ್ಪಿಸಿದರು.
ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ (30)ಹಾಗೂ ಶ್ರೇಯಸ್ ಅಯ್ಯರ್ (37)ಎರಡಂಕೆಯ ಸ್ಕೋರ್ ಗಳಿಸಿದರು.
ಇಂಗ್ಲೆಂಡ್ ಪರವಾಗಿ ವೇಗಿ ಜೋಫ್ರಾ ಆರ್ಚರ್ (4-33)ಯಶಸ್ವಿ ಬೌಲರ್ ಎನಿಸಿಕೊಂಡರು. ಸ್ಯಾಮ್ ಕರನ್(1-16), ಸ್ಟೋಕ್ಸ್(1-26), ವುಡ್(1-25) ಹಾಗೂ ರಶೀದ್ (1-39)ತಲಾ ಒಂದು ವಿಕೆಟ್ ಪಡೆದರು.
Next Story