ಟೋಕಿಯೊ ವಿಮಾನ ತಪ್ಪಿಸಿಕೊಂಡು ಸಮಸ್ಯೆಗೆ ಸಿಲುಕಿದ ಕುಸ್ತಿಪಟು ವಿನೇಶ್ ಫೋಗಟ್
ಹೊಸದಿಲ್ಲಿ: ಸ್ಟಾರ್ ಕುಸ್ತಿಪಟು ಹಾಗೂ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದವರಲ್ಲಿ ಒಬ್ಬರಾಗಿರುವ ವಿನೇಶ್ ಫೋಗಟ್ ಮಂಗಳವಾರ ಜರ್ಮನಿಯ ಫ್ರಾಂಕ್ ಫರ್ಟ್ನಿಂದ ಟೋಕಿಯೊಗೆ ಹೊರಟ ವಿಮಾನವನ್ನು ತಪ್ಪಿಸಿಕೊಂಡು ಸಮಸ್ಯೆ ಎದುರಿಸಿದರು.
ಪಿಟಿಐ ಪ್ರಕಾರ, ಫೋಗಟ್ ತನ್ನ ಯುರೋಪಿಯನ್ ಯೂನಿಯನ್ (ಇಯು) ವೀಸಾದೊಂದಿಗೆ ಒಂದು ದಿನಕ್ಕಿಂತ ಹೆಚ್ಚು ಕಾಲ ಉಳಿದುಕೊಂಡಿದ್ದರು ಎಂದು ತಿಳಿದುಬಂದಿದೆ. 26 ರ ಹರೆಯದ ಫೋಗಟ್ ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿದ್ದು, ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದಿದ್ದಾರೆ.
"ಇದು ಕಣ್ತಪ್ಪಿನಿಂದಾಗಿ ಆಗಿದ್ದು,ಉದ್ದೇಶಪೂರ್ವಕವಾಗಿ ಮಾಡಲಾಗಿಲ್ಲ. ಫೋಗಟ್ ಷೆಂಗೆನ್ ವೀಸಾದ ಪ್ರಕಾರ ಬುಡಾಪೆಸ್ಟ್ನಿಂದ ಫ್ರಾಂಕ್ಫರ್ಟ್ಗೆ ಬಂದಿಳಿದ ನಂತರ 90 ದಿನಗಳ ಬದಲು 91 ದಿನಗಳ ಕಾಲ ಯುರೋಪಿಯನ್ ಯೂನಿಯನ್ ನಲ್ಲಿದ್ದರು ಎಂದು ಲೆಕ್ಕಹಾಕಲಾಗಿದೆ" ಎಂದು ಐಒಎ ಅಧಿಕಾರಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
"ಈ ವಿಷಯವನ್ನು ಸಾಯ್ ತ್ವರಿತವಾಗಿ ಕೈಗೆತ್ತಿಕೊಂಡಿತು ಹಾಗೂ ಫ್ರಾಂಕ್ಫರ್ಟ್ನಲ್ಲಿರುವ ಭಾರತೀಯ ದೂತಾವಾಸವು ವಿಮಾನ ನಿಲ್ದಾಣವನ್ನು ತಲುಪಿತು. ವಿನೇಶ್ ನಾಳೆ ಟೋಕಿಯೊದಲ್ಲಿ ಇರಲಿದ್ದಾರೆ’’ಎಂದು ವರದಿಯಾಗಿದೆ.
ಕ್ರೀಡಾಕೂಟಕ್ಕೆ ಮುಂಚಿತವಾಗಿ ತನ್ನ ತರಬೇತುದಾರ ವೊಲ್ಲರ್ ಅಕೋಸ್ ಅವರೊಂದಿಗೆ ಹಂಗೇರಿಯಲ್ಲಿ ತರಬೇತಿ ಪಡೆಯುತ್ತಿದ್ದ ಫೋಗಟ್ ಮಂಗಳವಾರ ರಾತ್ರಿ ಟೋಕಿಯೊ ತಲುಪಬೇಕಿತ್ತು. ಆದರೆ ಜಪಾನಿನ ರಾಜಧಾನಿಗೆ ಸಂಪರ್ಕ ಕಲ್ಪಿಸುವ ವಿಮಾನ ಹತ್ತುವ ಮೊದಲು ಆಕೆಯನ್ನು ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ತಡೆಯಲಾಯಿತು.