ಒಲಿಂಪಿಕ್ಸ್ ಬ್ಯಾಡ್ಮಿಂಟನ್: ಪಿ.ವಿ.ಸಿಂಧು ಪ್ರಿ-ಕ್ವಾರ್ಟರ್ ಫೈನಲ್ ಗೆ ಲಗ್ಗೆ
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಗೆಲುವಿನ ಓಟವನ್ನು ಮುಂದುವರಿಸಿದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ, ಹಾಲಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಬುಧವಾರ ನಡೆದ 'ಜೆ' ಗುಂಪಿನ ಪಂದ್ಯದಲ್ಲಿ ಸಿಂಧು ಹಾಂಕಾಂಗ್ ನ ಚೆವುಂಗ್ ರಿಂದ ಹೆಚ್ಚು ಸವಾಲು ಎದುರಿಸದೇ ಕೇವಲ 35 ನಿಮಿಷಗಳ ಆಟದಲ್ಲಿ 21-9, 21-16 ನೇರ ಗೇಮ್ ಗಳಿಂದ ಜಯ ಸಾಧಿಸಿ ಅಂತಿಮ-16ರ ಸುತ್ತು ತಲುಪಿದ್ದಾರೆ.
ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕವನ್ನು ಜಯಿಸಿರುವ 26ರ ಹರೆಯದ ಸಿಂಧು ಅವರು ವಿಶ್ವದ ನಂ.34ನೇ ಆಟಗಾರ್ತಿ ಚುವುಂಗ್ ವಿರುದ್ಧ ಆಡಿರುವ ಆರನೇ ಪಂದ್ಯವನ್ನೂ ಗೆಲ್ಲುವುದರೊಂದಿಗೆ ಅಜೇಯ ಗೆಲುವಿನ ದಾಖಲೆಯನ್ನು ಮುಂದು ವರಿಸಿದ್ದಾರೆ.
ವಿಶ್ವದ ನಂ.7ನೇ ಆಟಗಾರ್ತಿ ಸಿಂಧು ಮುಂದಿನ ಸುತ್ತಿನಲ್ಲಿ ವಿಶ್ವದ ನಂ.12ನೇ ಆಟಗಾರ್ತಿ ಮಿಯಾ ಬ್ಲಿಚ್ ಫೆಲ್ಟ್ ಅವರನ್ನು ಎದುರಿಸಲಿದ್ದಾರೆ. ಸಿಂಧು ಅವರು ಮಿಯಾ ವಿರುದ್ಧ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ದಾಖಲಿಸಿದ್ದಾರೆ. ಈ ವರ್ಷದ ಥಾಯ್ಲೆಂಡ್ ಓಪನ್ ನಲ್ಲಿ ಸಿಂಧು ವಿರುದ್ದ ಮಿಯಾ ಏಕೈಕ ಗೆಲುವು ದಾಖಲಿಸಿದ್ದರು.