ಐಪಿಎಲ್:ಸನ್ ರೈಸರ್ಸ್ ಹೈದರಾಬಾದ್ 134/9
ಕಾಗಿಸೊ ರಬಾಡಗೆ ಮೂರು ವಿಕೆಟ್
ದುಬೈ: ಐಪಿಎಲ್ ಟೂರ್ನಿಯ 33ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶಿಸ್ತುಬದ್ದ ಬೌಲಿಂಗ್ ಪ್ರದರ್ಶಿಸಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 134 ರನ್ ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.
ದ.ಆಫ್ರಿಕಾದ ವೇಗದ ಬೌಲರ್ ಕಾಗಿಸೊ ರಬಾಡ(3-37) ಯಶಸ್ವಿ ಬೌಲರ್ ಎನಿಸಿಕೊಂಡರು. ಅನ್ರಿಚ್ ನೋಟ್ಜೆ(2-12) ಹಾಗೂ ಅಕ್ಷರ್ ಪಟೇಲ್ (2-21)ತಲಾ ಎರಡು ವಿಕೆಟ್ ಪಡೆದರು.
ಬುಧವಾರ ಟಾಸ್ ಜಯಿಸಿದ ಸನ್ ರೈಸರ್ಸ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್ ನ ಮೊದಲ ಓವರ್ ನ 3ನೇ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಶೂನ್ಯಕ್ಕೆ ನೋಟ್ಜೆಗೆ ವಿಕೆಟ್ ಒಪ್ಪಿಸಿದರು. ವಾರ್ನರ್ ವಿಕೆಟ್ ಪತನದೊಂದಿಗೆ ಸನ್ ರೈಸರ್ಸ್ ನಿರೀಕ್ಷೆ ಆರಂಭ ಪಡೆಯಲಿಲ್ಲ.
ಅಬ್ದುಲ್ ಸಮದ್(28) ಸರ್ವಾಧಿಕ ಸ್ಕೋರ್ ಗಳಿಸಿದರು. ರಶೀದ್ ಖಾನ್(22), ಸಹಾ(18) , ವಿಲಿಯಮ್ಸನ್(18)ಹಾಗೂ ಮನೀಷ್ ಪಾಂಡೆ(17) ಎರಡಂಕೆಯ ಸ್ಕೋರ್ ಗಳಿಸಿದರು. 20ನೇ ಓವರ್ ನಲ್ಲಿ ರಶೀದ್ ಖಾನ್ ಹಾಗೂ ಸಂದೀಪ್ ಶರ್ಮಾ ಬೆನ್ನುಬೆನ್ನಿಗೆ ರನೌಟಾದರು.