ಆರ್ ಸಿಬಿ ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ನೇಮಕ
ಬೆಂಗಳೂರು: ಮುಂದಿನ 2 ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಂಗಳವಾರ ಪ್ರಕಟಿಸಿದೆ. ಆಸ್ಟ್ರೇಲಿಯದ ಮಾಜಿ ಆರಂಭಿಕ ಆಟಗಾರ ಸೈಮನ್ ಕ್ಯಾಟಿಚ್ ಬದಲಿಗೆ ಬಂಗಾರ್ ಆರ್ಸಿಬಿಯ ಮುಖ್ಯ ಕೋಚ್ ಆಗಲಿದ್ದಾರೆ.
ರವಿ ಶಾಸ್ತ್ರಿ ಅವರೊಂದಿಗೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡಿದ್ದ ಸಂಜಯ್ ಬಂಗಾರ್ ಐಪಿಎಲ್ 2021 ರ ಸಮಯದಲ್ಲಿ ಆರ್ ಸಿಬಿಯ ಬ್ಯಾಟಿಂಗ್ ಸಲಹೆಗಾರರಾಗಿದ್ದರು. ಮೈಕ್ ಹೆಸ್ಸನ್ ಅವರು ಕ್ರಿಕೆಟ್ ನಿರ್ದೇಶಕರಾಗಿ ಮುಂದುವರಿಯುತ್ತಾರೆ. ವೈಯಕ್ತಿಕ ಕಾರಣಗಳಿಂದಾಗಿ ಐಪಿಎಲ್ 2021 ರ ದ್ವಿತೀಯಾರ್ಧದಿಂದ ಕ್ಯಾಟಿಚ್ ಹಿಂದೆ ಸರಿದ ನಂತರ ಮಾಜಿ ನ್ಯೂಝಿಲ್ಯಾಂಡ್ ಕೋಚ್ ಹೆಸ್ಸನ್ ಆರ್ ಸಿಬಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ವಿರಾಟ್ ಕೊಹ್ಲಿ ಈಗಾಗಲೇ ನಾಯಕತ್ವದಿಂದ ಕೆಳಗಿಳಿದಿರುವುದರಿಂದ ಆರ್ ಸಿಬಿ ಹೊಸ ಯುಗಕ್ಕೆ ಹೋಗಲಿದೆ. ಭಾರತದ ಬ್ಯಾಟಿಂಗ್ ಸ್ಟಾರ್ ಕೊಹ್ಲಿ ಆರ್ ಸಿಬಿ ಗಾಗಿ ಆಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.