ಭದ್ರತೆ ಉಲ್ಲಂಘಿಸಿ ಸೆಲ್ಫಿ ತೆಗೆದ ನಾಲ್ವರು ವಿರಾಟ್ ಕೊಹ್ಲಿ ಅಭಿಮಾನಿಗಳ ಬಂಧನ
ಬೆಂಗಳೂರು, ಮಾ.14: ತಮ್ಮ ನೆಚ್ಚಿನ ಸ್ಟಾರ್ ವಿರಾಟ್ ಕೊಹ್ಲಿ ಜೊತೆ ಸೆಲ್ಫಿಗಳನ್ನು ಕ್ಲಿಕ್ಕಿಸಲು ಭದ್ರತೆಯನ್ನು ಉಲ್ಲಂಘಿಸಿ ಮೈದಾನದೊಳಗೆ ನುಗ್ಗಿದ್ದ ಕೊಹ್ಲಿಯವರ ನಾಲ್ವರು ಕ್ರಿಕೆಟ್ ಅಭಿಮಾನಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕಬ್ಬನ್ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಭಿಮಾನಿಗಳ ಪೈಕಿ ಓರ್ವ ಕಲಬುರಗಿಯವರನಾಗಿದ್ದು, ಇತರ ಮೂವರು ಬೆಂಗಳೂರಿಗರಾಗಿದ್ದಾರೆ. ಇವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಈ ನಾಲ್ವರ ವಿರುದ್ಧ ಅತಿಕ್ರಮಣ ಹಾಗೂ ಭದ್ರತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರವಿವಾರ ರಾತ್ರಿ 10:15ರ ಸುಮಾರಿಗೆ ಭಾರತ-ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ವೇಳೆ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಏಕಾಏಕಿ ಮೈದಾನದೊಳಗೆ ನುಗ್ಗಿದ ಈ ನಾಲ್ವರು ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ವಿರಾಟ್ ಕೊಹ್ಲಿಯವರತ್ತ ಓಡಿದ್ದರು. ವಿರಾಟ್ ಕೊಹ್ಲಿ ತನ್ನ ಅಭಿಮಾನಿಗಳನ್ನು ಹತ್ತಿರ ಬರದಂತೆ ಕೇಳಿಕೊಂಡರೂ ಅಭಿಮಾನಿಗಳ ದುಸ್ಸಾಹಸವು ಅವರನ್ನು ತೊಂದರೆಗೆ ಸಿಲುಕಿಸಿದೆ. ಕೂಡಲೇ ಕಬ್ಬನ್ ಪಾರ್ಕ್ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರು ಎನ್ನಲಾಗಿದೆ.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಕಾರಣ ಬೆಂಗಳೂರಿನ ಅಭಿಮಾನಿಗಳೊಂದಿಗೆ ವಿರಾಟ್ ಕೊಹ್ಲಿ ವಿಶೇಷ ಭಾಂದವ್ಯ ಹೊಂದಿದ್ದಾರೆ.