ವೃತ್ತಿಜೀವನದುದ್ದಕ್ಕೂ ನಂ.7 ಜರ್ಸಿ ಧರಿಸಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಧೋನಿ
ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ನಾಯಕ ಎಂ.ಎಸ್ ಧೋನಿ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ನಂ.7 ಜರ್ಸಿಯನ್ನು ಧರಿಸಿದ್ದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ನಿರ್ದಿಷ್ಟ ಸಂಖ್ಯೆಯು "ಅದೃಷ್ಟ" ಎಂಬ ಕಾರಣದಿಂದ ಹೀಗೆ ಮಾಡಿಲ್ಲ ಎಂದಿದ್ದಾರೆ.
ತಾನು ಜುಲೈ 7 ರಂದು ಜನಿಸಿದ ಕಾರಣ ಈ ಸಂಖ್ಯೆಯನ್ನು ಆಯ್ಕೆ ಮಾಡಿರುವುದಾಗಿ ಧೋನಿ ಬಹಿರಂಗಪಡಿಸಿದ್ದಾರೆ. 40 ವರ್ಷದ ಅವರು ತಾನು ಮೂಢನಂಬಿಕೆಯ ವ್ಯಕ್ತಿಯಲ್ಲ ಎಂದು ಹೇಳಿದ್ದಾರೆ. 2020 ರಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಧೋನಿ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮುನ್ನಡೆಸಲಿದ್ದಾರೆ.
"ಮೊದಲಿಗೆ ಬಹಳಷ್ಟು ಜನರು ನನಗೆ 7 ಅದೃಷ್ಟದ ಸಂಖ್ಯೆ ಎಂದು ಭಾವಿಸಿದ್ದರು. ಆದರೆ ನಾನು ತುಂಬಾ ಸರಳವಾದ ಕಾರಣಕ್ಕಾಗಿ ಸಂಖ್ಯೆಯನ್ನು ಆರಿಸಿದೆ. ನಾನು ಜುಲೈ 7 ರಂದು ಜನಿಸಿದ್ದೆ. ಅದು 7 ನೇ ತಿಂಗಳ 7 ನೇ ದಿನವಾಗಿದೆ. ನಾನು ನನ್ನ ಜನ್ಮ ದಿನಾಂಕವನ್ನು ಜರ್ಸಿ ಸಂಖ್ಯೆಯಾಗಿ ಬಳಸಲು ನಿರ್ಧರಿಸಿದ್ದೆ " ಎಂದು ಧೋನಿ ಸಿಎಸ್ಕೆ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಐಪಿಎಲ್ 2022 ರ ಸೀಸನ್ ಮಾರ್ಚ್ 26 ರಂದು ಆರಂಭವಾಗುತ್ತದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಮೆಂಟ್ ಆರಂಭಿಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಅನ್ನು ಎದುರಿಸಲಿದೆ.