ಅರ್ಜುನ್ ತೆಂಡುಲ್ಕರ್ ಯಾರ್ಕರ್ಗೆ ಗಾಯಗೊಂಡ ಇಂಗ್ಲೆಂಡ್ ಬ್ಯಾಟ್ಸ್ಮನ್!
ಲಂಡನ್,ಜು.6: ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಿಂತ ಮೊದಲು ಇಂಗ್ಲೆಂಡ್ ಗಾಯದ ಭೀತಿ ಎದುರಿಸುವಂತಾಗಿದೆ. ತಂಡದ ಪ್ರಮುಖ ಆಟಗಾರ ಜಾನಿ ಬೈರ್ಸ್ಟೋವ್ಗೆ ಬುಧವಾರ ಪ್ರಾಕ್ಟೀಸ್ ನಡೆಸುತ್ತಿದ್ದಾಗ ಕಾಲಿಗೆ ಗಾಯವಾಗಿದೆ. ಅವರು ಗಾಯಗೊಳ್ಳಲು ಕಾರಣ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ರ ಪುತ್ರ ಅರ್ಜುನ್ ತೆಂಡುಲ್ಕರ್!.
ಬಲಗೈ ಬ್ಯಾಟ್ಸ್ಮನ್ ಬೈರ್ಸ್ಟೋವ್ ಲಾರ್ಡ್ಸ್ನಲ್ಲಿ ಪ್ರಾಕ್ಟೀಸ್ ನಡೆಸುತ್ತಿದ್ದಾಗ ತೆಂಡುಲ್ಕರ್ ಪುತ್ರ ಅರ್ಜುನ್ ಅವರು ಬೈರ್ಸ್ಟೋವ್ಗೆ ಬೌಲಿಂಗ್ ಮಾಡಿದರು. 17ರ ಹರೆಯದ ಅರ್ಜುನ್ ಎಸೆದ ಮೊದಲ ಎಸೆತದಲ್ಲೇ ಬೈರ್ಸ್ಟೊವ್ ಕಾಲಿಗೆ ಗಾಯವಾಯಿತು. ಅರ್ಜುನ್ ಎಸೆದಿದ್ದ ಯಾರ್ಕರ್ ಎಸೆತವೊಂದು ಬೈರ್ಸ್ಟೊವ್ ಕಾಲಿಗೆ ಅಪ್ಪಳಿಸಿತ್ತು. ಇದರಿಂದ ಅವರು ತನ್ನ ಅಭ್ಯಾಸವನ್ನು ಮೊಟಕುಗೊಳಿಸಬೇಕಾಯಿತು.
ಇಂಗ್ಲೆಂಡ್ ತಂಡ ಗುರುವಾರ ಆರಂಭವಾಗಲಿರುವ ಮೊದಲ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕವನ್ನು ಎದುರಿಸಲಿದೆ. ಬೈರ್ಸ್ಟೋವ್ಗೆ ಆಗಿರುವ ಗಾಯ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳುವಷ್ಟು ಗಂಭೀರವಾದುದಲ್ಲ ಎಂದು ತಿಳಿದುಬಂದಿದೆ.
ಅರ್ಜುನ್ ಇಂಗ್ಲೆಂಡ್ ಕ್ರಿಕೆಟ್ ತಂಡದೊಂದಿಗೆ ಅಭ್ಯಾಸ ನಡೆಸುತ್ತಿರುವುದು ಇದೇ ಮೊದಲಲ್ಲ. ಸಚಿನ್ ತೆಂಡುಲ್ಕರ್ ಅವರು ಲಾರ್ಡ್ಸ್ ಕ್ರೀಡಾಂಗಣದ ಸಮೀಪವೇ ನಿವಾಸ ಹೊಂದಿರುವ ಹಿನ್ನೆಲೆಯಲ್ಲಿ ಅರ್ಜುನ್ ಹೆಚ್ಚಾಗಿ ಲಾರ್ಡ್ಸ್ ಕ್ರೀಡಾಂಗಣವನ್ನೇ ಅಭ್ಯಾಸ ತಾಣವಾಗಿ ಮಾಡುತ್ತಾರೆ.