-

‘ಡಿಜಿಟಲ್ ಇಂಡಿಯಾ’ ಪ್ರಯೋಗಕ್ಕೆ ಉಪಕುಲಪತಿ ಬಲಿ!

-

ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ ‘ಡಿಜಿಟಲ್ ಇಂಡಿಯಾ’ ಮಹತ್ವಾಕಾಂಕ್ಷೆಯು ಮುಂಬೈ ವಿಶ್ವವಿದ್ಯಾನಿಲಯದ ಉಪಕುಲಪತಿ ಸಂಜಯ ದೇಶ್‌ಮುಖ್ ಅವರನ್ನು ಬಲಿ ಪಡೆಯಿತು. ಮುಂಬೈ ಯುನಿವರ್ಸಿಟಿಯ ನೂರೈವತ್ತು ವರ್ಷದ ಇತಿಹಾಸದಲ್ಲಿ ಮೊದಲ ಬಾರಿ ಉಪಕುಲಪತಿಯವರನ್ನು ವಜಾ ಮಾಡುವ ದೃಶ್ಯ ಕಾಣಿಸಿತು. ಮುಂಬೈ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿದ್ದ ಡಾ. ಸಂಜಯ ದೇಶ್‌ಮುಖ್‌ರನ್ನು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಅಕ್ಟೋಬರ್ 24ರಂದು ವಜಾ ಮಾಡುವ ಆದೇಶ ಜಾರಿಗೊಳಿಸಿದರು.

ವಿಶ್ವವಿದ್ಯಾನಿಲಯದ ಪರೀಕ್ಷಾ ಫಲಿತಾಂಶಗಳಲ್ಲಿ ಅಭೂತಪೂರ್ವ ವಿಳಂಬ ಕಾಣಿಸಿರುವುದರಿಂದ ಡಾ. ದೇಶ್‌ಮುಖ್‌ರನ್ನು ಕಳೆದ ನಾಲ್ಕು ತಿಂಗಳುಗಳಿಂದ ರಜೆಯಲ್ಲಿ ಕಳುಹಿಸಲಾಗಿತ್ತು. ಇದೀಗ ಆ ಹುದ್ದೆಯಿಂದ ವಜಾ ಮಾಡಲಾಗಿದೆ. ರಾಜ್ಯಪಾಲ ವಿದ್ಯಾಸಾಗರ್ ರಾವ್ ದೇಶ್‌ಮುಖ್‌ರಿಗೆ ರಾಜೀನಾಮೆ ನೀಡುವಂತೆ ನಿರಂತರವಾಗಿ ಒತ್ತಡ ಹಾಕಿದ್ದರು. ಆದರೆ ಉಪಕುಲಪತಿ ದೇಶ್‌ಮುಖ್ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದರು. ಕೊನೆಗೂ ರಾಜ್ಯಪಾಲರು ‘ಮಹಾರಾಷ್ಟ್ರ ಪಬ್ಲಿಕ್ ಯುನಿವರ್ಸಿಟಿಸ್ ಆ್ಯಕ್ಟ್ 2016’ ರ ಕಲಂ 11(4)ರ ಅನ್ವಯ ಅವರನ್ನು ಹುದ್ದೆಯಿಂದ ತೆಗೆದು ಹಾಕಿದರು.

ರಾಜ್‌ಭವನದ ಪ್ರಕಟಣೆಯಲ್ಲಿ ಅವರನ್ನು ಘೋರ ನಿರ್ಲಕ್ಷ್ಯ ಮತ್ತು ಆನ್ ಸ್ಕ್ರೀನ್ ಮಾರ್ಕಿಂಗ್ ಸಿಸ್ಟಮ್‌ನ ವಿಫಲತೆಯ ತಪ್ಪಿತಸ್ತರೆಂದು ಹೇಳಲಾಗಿದೆ. ಅಷ್ಟೇ ಅಲ್ಲ, ಪರೀಕ್ಷೆಗಳ ಫಲಿತಾಂಶದ ಸಂಬಂಧವಾಗಿ ರಾಜ್ಯಪಾಲರ ನಿರ್ದೇಶನಗಳನ್ನು ಮತ್ತೆ ಮತ್ತೆ ಉಲ್ಲಂಘಿಸಿರುವ ಆರೋಪವನ್ನೂ ಉಪಕುಲಪತಿ ದೇಶ್‌ಮುಖ್‌ರ ಮೇಲೆ ಹೊರಿಸಲಾಗಿದೆ. ಮುಂಬೈ ವಿಶ್ವವಿದ್ಯಾನಿಲಯದ ಸ್ಥಾಪನೆಯ (ಸ್ಥಾಪನೆ; 18 ಜುಲೈ 1857) ನಂತರ ಈ ವರೆಗಿನ ಪರೀಕ್ಷಾ ಫಲಿತಾಂಶಗಳನ್ನು ಗಮನಿಸಿದರೆ 2017 ರ ಪರೀಕ್ಷೆಗಳ ಫಲಿತಾಂಶದಲ್ಲಿ ಕಂಡು ಬಂದಿರುವ ಘೋರ ತಪ್ಪುಗಳು ಎಂದೂ ಸಂಭವಿಸಿರಲಿಲ್ಲ. ವಿ.ವಿ. ಈ ಬಾರಿ ಮೌಲ್ಯಮಾಪನಕ್ಕಾಗಿ ಶಿಕ್ಷಕರನ್ನು ಕಳುಹಿಸಲಿಲ್ಲ. ಅದರ ಬದಲು ಸ್ಕ್ಯಾನ್ ಮಾಡಿ ಇಲೆಕ್ಟ್ರಾನಿಕ್ ರೀತಿಯಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವವರನ್ನು ಕಳುಹಿಸಿಕೊಟ್ಟಿತು.

ಆಶ್ಚರ್ಯವೆಂದರೆ ಬಂದಿರುವ ಫಲಿತಾಂಶಗಳ ನಂತರ ಉತ್ತರ ಪತ್ರಿಕೆಗಳ ಮರುಮೌಲ್ಯ ಮಾಪನಕ್ಕಾಗಿ ಈ ಬಾರಿ ಪ್ರಪ್ರಥಮವಾಗಿ ಐವತ್ತು (50) ಸಾವಿರದಷ್ಟು ವಿದ್ಯಾರ್ಥಿಗಳ ಅರ್ಜಿ ಬಂದಿತ್ತು ಎಂದರೆ ಎಷ್ಟು ತಪ್ಪುಗಳು ಸಂಭವಿಸಿರಬಹುದೆಂದು ಯಾರೂ ಊಹಿಸಬಹುದಾಗಿದೆ. ಅಷ್ಟೇ ಅಲ್ಲ, ಮೌಲ್ಯಮಾಪನ ಸಮಯದಲ್ಲಿ 3,700 ಉತ್ತರ ಪತ್ರಿಕೆಗಳು ಕಾಣೆಯಾಗಿದೆ. ಈ ವಿದ್ಯಾರ್ಥಿಗಳ ಗೋಳು ಕೇಳುವವರೂ ಇಲ್ಲದಂತಾಗಿತ್ತು. ಹಾಗೆ ನೋಡಿದರೆ ಉಪಕುಲಪತಿ ಸಂಜಯ ದೇಶ್‌ಮುಖ್ ಅವರನ್ನು ಸಂಘ ಪರಿವಾರದ ಪ್ರತಿನಿಧಿಯ ರೂಪದಲ್ಲೇ ಉಪಕುಲಪತಿ ಹುದ್ದೆಗೆ ಕೂರಿಸಲಾಗಿತ್ತು. ಇದೀಗ ಕುಲಪತಿ ರಾಜ್ಯಪಾಲರು ಅವರನ್ನು ವಜಾ ಮಾಡಿದ್ದಾರೆ.

ಆನ್‌ಲೈನ್ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಆಗ್ರಹವನ್ನು ಉಪಕುಲಪತಿ ಅವರೇ ಮಾಡಿದ್ದರು. ಆದರೆ ಯಾವ ಪೂರ್ವ ತಯಾರಿ ಮತ್ತು ಸರಿಯಾದ ತರಬೇತಿ ಇಲ್ಲದೆ ದೇಶ್‌ಮುಖ್ ಅವರು ಈ ಅನ್‌ಲೈನ್ ಹಗರಣ ಮಾಡಿದ್ದು ಇದರಿಂದ ಸಾವಿರಾರು ವಿದ್ಯಾರ್ಥಿಗಳ ಫಲಿತಾಂಶವು ಸಮಕ್ಕೆ ಸರಿಯಾಗಿ ಬರಲಿಲ್ಲ. ಯಾವ ವಿದ್ಯಾರ್ಥಿಗಳ ಫಲಿತಾಂಶ ಬಂದಿತ್ತೋ ಅದರಲ್ಲೂ ಹತ್ತಾರು ತಪ್ಪುಗಳು! ಮೇಧಾವಿ ವಿದ್ಯಾರ್ಥಿಗಳು ಫೇಲಾಗಿದ್ದರು. ಅನೇಕರು ಪರೀಕ್ಷೆಗೆ ಕೂತಿದ್ದರೂ ಅವರನ್ನು ಗೈರು ಹಾಜರಿ ಎನ್ನಲಾಗಿತ್ತು. ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಎಲ್ಲರೂ ಈ ಬಾರಿ ಫಲಿತಾಂಶ ವಿಳಂಬವಾದ ಮತ್ತು ತಪ್ಪುತಪ್ಪಾದ ಫಲಿತಾಂಶಗಳಿಂದ ತೀವ್ರ ಕಿರಿಕಿರಿಗೊಂಡಿದ್ದು ಯುನಿವರ್ಸಿಟಿಯ ಕಳೆದ ನೂರೈವತ್ತು ವರ್ಷಗಳಲ್ಲಿ ಇಂತಹ ದೃಶ್ಯ ಕಾಣಿಸಿರಲಿಲ್ಲ ಎಂದಿದ್ದಾರೆ.

ಉಪಕುಲಪತಿ ದೇಶ್‌ಮುಖ್ 2017ರಲ್ಲಿ ನಡೆದ ಪರೀಕ್ಷೆಗಳ ಮೌಲ್ಯ ಮಾಪನ ಆನ್‌ಲೈನ್‌ನಲ್ಲಿ ಮಾಡಲು ನಿರ್ಣಯಿಸಿದ್ದರು. ಆದರೆ ಇದನ್ನು ಪ್ರಭಾವೀ ರೀತಿಯಲ್ಲಿ ಅಳವಡಿಸಲು ಯಾವ ತಯಾರಿಯನ್ನು ನಡೆಸಬೇಕಾಗಿತ್ತೋ ಅದನ್ನು ಮಾಡಲೇ ಇಲ್ಲ. ಹಾಗಿದ್ದೂ ಆನ್‌ಲೈನ್ ಮೌಲ್ಯಮಾಪನದ ಕುದುರೆಯನ್ನು ಓಡಿಸಿದ್ದರು! ಈ ದೃಶ್ಯ ಆರಂಭದಿಂದಲೂ ವಿವಾದಗಳ ಸುರಿಮಳೆಯನ್ನೇ ಸೃಷ್ಟಿಸಿತ್ತು. ಇದಕ್ಕಾಗಿ ಮೆರಿಟ್ ಟ್ರ್ಯಾಕ್ ಹೆಸರಿನ ಕಂಪೆನಿಯನ್ನು ನಿಯುಕ್ತಿ ಮಾಡುವ ಸಮಯವೂ ದೇಶ್‌ಮುಖ್ ಗಮನವನ್ನೇ ನೀಡಲಿಲ್ಲ. ಅವಸರದಿಂದ ಕೈಗೊಂಡ ನಿರ್ಣಯ ಯಾವ ದುಷ್ಪರಿಣಾಮ ಬೀರುತ್ತದೆ. ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಉಪಕುಲಪತಿ ದೇಶ್‌ಮುಖ್ ಅವರು ಪ್ರಧಾನಿಯ ‘ಡಿಜಿಟಲ್ ಇಂಡಿಯಾ’ದ ಕನಸು ಸಾಕಾರಗೊಳಿಸಲು ಹೋಗಿ ಈಗ ತಾನೇ ವಜಾಗೊಳ್ಳುವ ಮಟ್ಟಕ್ಕೆ ತಲುಪಿ ಅದಕ್ಕೆ ಬಲಿಯಾಗುವಂತಾಗಿದೆ.
ದೇಶ್‌ಮುಖ್ ಅವರ ನಿಯುಕ್ತಿ ಆರಂಭದಿಂದಲೇ ವಿವಾದವನ್ನು ಎಬ್ಬಿಸಿತ್ತು. ಅವರಿಗೆ ವಿಶ್ವವಿದ್ಯಾನಿಲಯ ಅಥವಾ ಯಾವುದೇ ಕಾಲೇಜ್ ತನಕ ಕೆಲಸ ಮಾಡಿದ ಅನುಭವ ಇರಲಿಲ್ಲ. ಅವರು ತನ್ನದೇ ವಿಶ್ವವಿದ್ಯಾನಿಲಯ ನಡೆಸಿದ ಎಲ್.ಎಲ್.ಬಿ. ಪರೀಕ್ಷೆಯಲ್ಲಿ ಫೇಲಾಗಿದ್ದವರು. ಅವರು ಕಡಿಮೆ ಅವಧಿಯಲ್ಲಿ ಅತಿಹೆಚ್ಚು ದಾಖಲೆಯ ವಿದೇಶ ಯಾತ್ರೆ ಮಾಡಿದವರು!

ಆರ್.ಟಿ.ಐ.ಯಿಂದ ಪ್ರಕರಣ ಬೆಳಕಿಗೆ
ಮುಂಬೈ ವಿ.ವಿ.ಯ 2017ರ ಪರೀಕ್ಷೆಗಳ ಫಲಿತಾಂಶವು ವಿಳಂಬವಾಗಿರುವುದು ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಅವರಿಂದ ಬಹಿರಂಗಗೊಂಡು ಚರ್ಚೆ ಎಬ್ಬಿಸಿತ್ತು. ಆನಂತರ ರಾಜ್ಯಪಾಲರು ಉನ್ನತ ಮಟ್ಟದ ಬೈಠಕ್ ನಡೆಸಿ ಫಲಿತಾಂಶ ಶೀಘ್ರ ಘೋಷಿಸುವಂತೆ ಆದೇಶಿಸಿದ್ದರು. ಹಾಗೂ ಎಲ್ಲಾ ಪರೀಕ್ಷೆಗಳ ಫಲಿತಾಂಶವು 31 ಜುಲೈ 2017ರ ಒಳಗೆ ಘೋಷಿಸುವಂತೆ ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ. ಆನಂತರ ಆಗಸ್ಟ್ 9ರಂದು ದೇಶ್‌ಮುಖ್‌ರನ್ನು ರಜೆಯಲ್ಲಿ ಕಳುಹಿಸಿದ ರಾಜ್ಯಪಾಲರು ಆ ಹುದ್ದೆಯಲ್ಲಿ ದೇವಾನಂದ ಶಿಂಧೆ ಅವರನ್ನು ತಾತ್ಕಾಲಿಕ ಕಾರ್ಯಕಾರಿ ಉಪಕುಲಪತಿ ಎಂದು ನಿಯುಕ್ತಿ ಗೊಳಿಸಿದ್ದರು.

ನೂತನ ಉಪಕುಲಪತಿಗೆ ಸಿದ್ಧತೆ
ಮುಂಬೈ ವಿಶ್ವವಿದ್ಯಾನಿಲಯದ ನೂತನ ಉಪಕುಲಪತಿಯ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯಪಾಲ ಮತ್ತು ಮುಂಬೈ ವಿಶ್ವವಿದ್ಯಾನಿಲಯದ ಕುಲಪತಿ ಆಗಿರುವ ಸಿ. ವಿದ್ಯಾಸಾಗರ್ ರಾವ್ ಅವರು ನೂತನ ಉಪಕುಲಪತಿಯ ಆಯ್ಕೆಗಾಗಿ ಸರ್ಚ್ ಕಮಿಟಿ ರಚನೆ ಮಾಡಿದ್ದಾರೆ. ಈ ಸಮಿತಿಯ ಅಧ್ಯಕ್ಷ ಖ್ಯಾತ ವಿಜ್ಞಾನಿ ಡಾ. ಕೆ. ಕಸ್ತೂರಿ ರಂಗನ್ ಎಂದು ಹೇಳಲಾಗಿದೆ. ಕಸ್ತೂರಿ ರಂಗನ್ ಭಾರತೀಯ ಅಂತರಿಕ್ಷ ಅನುಸಂಧಾನ ಸಂಘಟನೆಯ ಅಧ್ಯಕ್ಷ ಮತ್ತು ಜೆ.ಎನ್.ಯು. ಇದರ ಮಾಜಿ ಉಪಕುಲಪತಿಯಾಗಿರುತ್ತಾರೆ. ಡಾ. ಸಂಜಯ್ ದೇಶ್‌ಮುಖ್‌ರನ್ನು ಉಪಕುಲಪತಿ ಹುದ್ದೆಯಿಂದ ತೆಗೆದು ಹಾಕಿದ ನಂತರ ಮರುದಿನ ಸರ್ಚ್ ಕಮಿಟಿಯ ರಚನೆ ಮಾಡಿದ್ದನ್ನು ವಿದ್ಯಾರ್ಥಿ ಸಂಘಟನೆಗಳು ಸ್ವಾಗತಿಸಿವೆ. ಡಾ.ಕೆ. ಕಸ್ತೂರಿ ರಂಗನ್ ಅವರ ಕಮಿಟಿ ಯೋಗ್ಯರನ್ನು ಆಯ್ಕೆ ಮಾಡುವ ಬಗ್ಗೆ ವಿದ್ಯಾರ್ಥಿಗಳು ಭರವಸೆ ಇರಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ವಿದ್ಯಾರ್ಥಿಗಳಿಗೆ ಆದ ನಷ್ಟದ ಬಗ್ಗೆ ಯಾರು ಹೊಣೆ? ಅನೇಕರ ಒಂದು ವರ್ಷ ಹಾಳಾಗಿ ಹೋಯಿತು. ಇದನ್ನು ಸರಕಾರ ತುಂಬಿಸಿ ಕೊಡುವುದೇ? ಮುಂದಿನ ವರ್ಷವೂ ಆನ್‌ಲೈನ್ ಮೌಲ್ಯಮಾಪನ ಎಂದು ವಿ.ವಿ. ಹೇಳಿದೆ. ಈ ನಿರ್ಣಯ ಯಾರು ಮಾಡಿದ್ದು? ಶಿಕ್ಷಣ ವಿಭಾಗ ಏನು ಮಾಡುತ್ತಿದೆ? ಉಪಕುಲಪತಿಯವರನ್ನು ವಜಾ ಮಾಡಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯಿತೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಯಾರು ನೀಡುವರು... ಎನ್ನುವುದು ಅನೇಕ ನೊಂದ ವಿದ್ಯಾರ್ಥಿಗಳ ಪ್ರಶ್ನೆ.

* * *

ಪತ್ರಿಕೆ ಮಾರಾಟಗಾರರ ಮೇಲೆ ಕಾರ್ಯಾಚರಣೆ ಇಲ್ಲ

ಮುಂಬೈಯಲ್ಲಿ ಪತ್ರಿಕೆಗಳನ್ನು ಮಾರುವ ಬೀದಿ ವ್ಯಾಪಾರಿಗಳ ಮೇಲೆ ಮಹಾನಗರ ಪಾಲಿಕೆಯು ಯಾವುದೇ ಕ್ರಮ ಕೈಗೊಳ್ಳಬಾರದೆಂದು ಮಹಾರಾಷ್ಟ್ರ ಸರಕಾರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಹಾನಗರ ಪಾಲಿಕೆಗೆ ಆದೇಶ ನೀಡಿದ್ದಾರೆ.
ಮುಂಬೈಯಲ್ಲೀಗ ಬೀದಿ ವ್ಯಾಪಾರಿಗಳ ಮೇಲೆ ಮಹಾನಗರ ಪಾಲಿಕೆಯು ಕಾರ್ಯಾಚರಣೆ ನಡೆಸುತ್ತಿದ್ದು ಅದರ ಜೊತೆ ಪತ್ರಿಕೆಗಳನ್ನು ಮಾರುವವರ ವಿರುದ್ಧವೂ ಕ್ರಮ ಕೈಗೊಳ್ಳುತ್ತಿದೆ. ಆದರೆ ಪತ್ರಿಕೆಗಳ ಮಾರಾಟಗಾರರು ಬೀದಿ ವ್ಯಾಪಾರಿಗಳ ಶ್ರೇಣಿಯಲ್ಲಿ ತಮ್ಮನ್ನು ಸೇರಿಸಬಾರದೆಂದು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.

* * *

ರೈಲ್ವೆ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಸ್ಟಾಲ್-ಶೌಚಾಲಯಗಳು ಬೇಡ!
ಪಶ್ಚಿಮ ರೈಲ್ವೆಯ ಉಪನಗರಗಳಲ್ಲಿನ ಹೆಚ್ಚಿನ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಎರಡೂ ಕಡೆ ರೈಲ್ವೆ ಸ್ಟಾಲ್‌ಗಳು ಮತ್ತು ಶೌಚಾಲಯಗಳು ಇವೆ. ಆದರೆ ಇತ್ತೀಚೆಗೆ ಸಂಭವಿಸಿದ ದುರ್ಘಟನೆಯ ನಂತರ (ಕಾಲ್ತುಳಿತ) ಇದೀಗ ರೈಲ್ವೆ ಪ್ಲ್ಯಾಟ್‌ಫಾರ್ಮ್‌ಗಳಲ್ಲಿನ ತಿಂಡಿ ಸ್ಟಾಲ್ ಹಾಗೂ ಶೌಚಾಲಯಗಳನ್ನು ತೆಗೆದು ಹಾಕುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ರೀತಿಯ ಸಲಹೆಯೊಂದನ್ನು ಅನುಶಾಸನಾತ್ಮಕ ಲೇಖಾ ಪರೀಕ್ಷೆಯ ವರದಿಯೊಂದರಲ್ಲಿ ನೀಡಲಾಗಿದೆ. ಈ ರೀತಿ ಸ್ಟಾಲ್‌ಗಳು ಪ್ಲ್ಯಾಟ್ ಫಾರ್ಮ್‌ಗಳಲ್ಲಿದ್ದರೆ ಪ್ರಯಾಣಿಕರು ಹತ್ತಿ ಇಳಿಯಲು, ಓಡಾಡಲು ಭಾರೀ ಸಂಕಷ್ಟ ಎದುರಿಸಬೇಕಾಗುತ್ತದೆ.

ರೈಲ್ವೆಯ ಒಂದು ವಿಭಾಗವು ಇದೇ ಆಶಯದ ಗುಪ್ತ ವರದಿ ತಯಾರಿಸಿದೆ. ಪಶ್ವಿಮ ರೈಲ್ವೆಯ ಸ್ಟೇಷನ್ ಪರಿಸರದಲ್ಲಿ ಇದೀಗ 1060 ಸಿಸಿಟಿವಿ ಕ್ಯಾಮರಾಗಳ ಬದಲು 2,729 ಕ್ಯಾಮರಾಗಳನ್ನು ತಾಗಿಸಲಾಗುವುದೆಂದು ರೈಲ್ವೆ ಆಡಳಿತ ತಿಳಿಸಿದೆ.ಹೊಸ ಸಿಸಿಟಿವಿ ಕ್ಯಾಮರಾಗಳು ಉನ್ನತ ಗುಣಮಟ್ಟವನ್ನು ಹೊಂದಿದ್ದು ಈ ಕ್ಯಾಮರಾಗಳು ರೈಲ್ವೆ ಸ್ಟೇಷನ್ ಮತ್ತು ಸೇತುವೆಗಳಲ್ಲಿ ಜನದಟ್ಟಣೆ ಹೆಚ್ಚಿಗಿದ್ದರೆ ಕಂಟ್ರೋಲ್ ರೂಮ್‌ನ್ನು ಅಲರ್ಟ್ ಮಾಡುವ ಟೆಕ್ನಾಲಜಿಯ ಸಾಮರ್ಥ್ಯ ಹೊಂದಿವೆ.

* * *

ಮಾನಸಿಕ ರೋಗಿಗಳ ಸಂಖ್ಯೆ ದುಪ್ಪಟ್ಟು
ಮುಂಬೈ ಮಹಾನಗರದಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ವೃದ್ಧಿಯಾಗುತ್ತಿರುವ ಕಳವಳಕಾರಿ ವರದಿ ಬಂದಿದೆ. ಮನೋರೋಗ ತಜ್ಞರ ಅನುಸಾರ ಕಳೆದ ಒಂದು ದಶಕದಲ್ಲಿ ಮಾನಸಿಕ ಸಮಸ್ಯೆಗಳಿಂದ ಕಿರಿಕಿರಿ ಅನುಭವಿಸುತ್ತಿರುವ ವ್ಯಕ್ತಿಗಳ ಸಂಖ್ಯೆಯಲ್ಲಿ ಎರಡು ಪಟ್ಟು ವೃದ್ಧಿಯಾಗಿದೆ. ಹೆಲ್ತ್ ಮ್ಯಾನೇಜ್‌ಮೆಂಟ್ ಇನ್ಫಾರ್ಮೇಶನ್ ಸಿಸ್ಟಮ್ ನಲ್ಲಿ(ಎಚ್.ಎಂ.ಐ.ಎಸ್) ದೊರೆತ ಅಂಕಿ ಅಂಶದ ಅನುಸಾರ ಈ ವರ್ಷ ಎಪ್ರಿಲ್‌ನಿಂದ ಹಿಡಿದು ಸೆಪ್ಟಂಬರ್ ತನಕ ರಾಜ್ಯಾದ್ಯಂತ ಮಾನಸಿಕ ಸಮಸ್ಯೆಗಳಿಂದ ತೊಂದರೆಗೊಳಗಾದ 1 ಲಕ್ಷಕ್ಕೂ ಅಧಿಕ ಜನ ಆಸ್ಪತ್ರೆಗೆ ಶುಶ್ರೂಷೆಗಾಗಿ ಭರ್ತಿಗೊಂಡಿದ್ದರು. ಅದೇ ರೀತಿ ಈ ಆರು ತಿಂಗಳಲ್ಲಿ ಮುಂಬೈಯಲ್ಲಿ ಮಾನಸಿಕ ಸಮಸ್ಯೆಗಳಿಂದ ಒಪಿಡಿಗೆ ಬಂದ ರೋಗಿಗಳ ಸಂಖ್ಯೆ 35 ಸಾವಿರ ದಾಟಿದೆ.

ಮನೋರೋಗ ಚಿಕಿತ್ಸೆಯ ವೈದ್ಯರಾದ ಡಾ. ಯುಸುಫ್ ಮಾಚೀಸ್‌ವಾಲಾ ಅವರು ತಿಳಿಸಿದಂತೆ ‘‘ಕಳೆದೆರಡು ದಶಕಗಳಿಂದ ಮಹಾನಗರದಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಭಾರೀ ವೃದ್ಧಿಯಾಗಿದೆ. 80-90ರ ದಶಕಗಳಲ್ಲಿ ಸ್ಕಿಜೋಫ್ರೆನಿಯಾ, ಬೈಪೋಲರ್ ಡಿಸ್ ಆರ್ಡರ್.... ಇಂತಹ ಗಂಭೀರ ಮಾನಸಿಕ ರೋಗಿಗಳಷ್ಟೇ ಆಸ್ಪತ್ರೆಗೆ ಬರುತ್ತಿದ್ದರು. ಆದರೆ ಈಗ ಜನರಲ್ಲಿ ಭಯ, ಅಶಾಂತಿ, ಖಿನ್ನತೆ... ಇವೆಲ್ಲ ಹೆಚ್ಚಿನ ಕಿರಿಕಿರಿಗೆ ಕಾರಣವಾಗುತ್ತಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top