ಜಸ್ಪ್ರೀತ್ ಬುಮ್ರಾ ತಾತನ ಮೃತದೇಹ ಸಾಬರಮತಿ ನದಿಯಲ್ಲಿ ಪತ್ತೆ
ಹೊಸದಿಲ್ಲಿ, ಡಿ.10: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಜಸ್ಪ್ರೀತ್ ಬುಮ್ರಾ ಅವರ ತಾತನ ಮೃತದೇಹ ಸಾಬರಮತಿ ನದಿಯಲ್ಲಿ ಪತ್ತೆಯಾಗಿದೆ. ಗಾಂಧಿ ಸೇತುವೆ ಹಾಗು ದಧೀಚಿ ಸೇತುವೆಯ ನಡುವೆ ಜಸ್ಪ್ರೀತ್ ರ ತಾತ ಸಂತೋಕ್ ಸಿಂಗ್ ಬುಮ್ರಾರ ಮೃತದೇಹ ಪತ್ತೆಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲೆತ್ತಿದ್ದಾರೆ.
84 ವರ್ಷದ ಸಂತೋಕ್ ಸಿಂಗ್ ಬುಮ್ರಾರನ್ನು ಭೇಟಿಯಾಗಲು ಅಹ್ಮದಾಬಾದ್ ಗೆ ತೆರಳಿದ್ದು, ಶುಕ್ರವಾರದಿಂದ ಅವರು ನಾಪತ್ತೆಯಾಗಿದ್ದರು ಎನ್ನಲಾಗಿದೆ.
ಡಿಸೆಂಬರ್ 1ರಂದು ವಸ್ತ್ರಾಪುರ್ ನ ತನ್ನ ಪುತ್ರಿಯ ಮನೆಯಲ್ಲಿ ಸಿಂಗ್ ಕಾಣಿಸಿಕೊಂಡಿದ್ದರು. ಡಿಸೆಂಬರ್ 5ರಂದು ಜಸ್ಪ್ರೀತ್ ರ ಹುಟ್ಟುಹಬ್ಬದ ದಿನ ಅವರನ್ನು ಭೇಟಿಯಾಗಲು ಸಿಂಗ್ ಬಯಸಿದ್ದರು. ಆದರೆ ಜಸ್ಪ್ರೀತ್ ರನ್ನು ಭೇಟಿಯಾಗಲು ಅವರಿಗೆ ಸಾಧ್ಯವಾಗಿರಲಿಲ್ಲ. ಡಿಸೆಂಬರ್ 8ರಂದು ಸಿಂಗ್ ತನ್ನ ಪುತ್ರ ಬಲ್ವೀಂದರ್ ಸಿಂಗ್ ಗೆ ಕರೆ ಮಾಡಿದ್ದು, ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿಯಾಗಲು ಹೊರಡುವುದಾಗಿ ಹೇಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಅಹ್ಮದಾಬಾದ್ ಮಿರರ್ ಶನಿವಾರ ವರದಿ ಮಾಡಿತ್ತು.