ಎಂಟನೇ ವರ್ಷಕ್ಕೆ ಮಾರಾಟವಾದ ಹದಿನಾರರ ಬಾಲಕಿ ನಾಲ್ಕು ಮಕ್ಕಳ ತಾಯಿ!
ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಲುಕಿದ್ದ ಬಾಲಕಿಯಿಂದ ತಂದೆ ಸಹಿತ ನಾಲ್ವರ ವಿರುದ್ಧ ದೂರು
ಬರೇಲಿ, ಎ.25: ಎಂಟನೇ ವರ್ಷದಲ್ಲಿ ತಂದೆಯಿಂದಲೇ ಮಾರಾಟವಾದ ಬಾಲಕಿ ಹದಿನಾರನೇ ವರ್ಷದಲ್ಲೇ ನಾಲ್ಕು ಮಕ್ಕಳ ತಾಯಿಯಾಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಮಾನವ ಕಳ್ಳಸಾಗಣೆ ಜಾಲದ ಮೂಲಕ ರಾಜಸ್ಥಾನದ ವ್ಯಕ್ತಿಯೊಬ್ಬರಿಗೆ ಮಾರಾಟವಾದ ಸಂಭಾಲ್ ಮೂಲದ ಈ ದಿಟ್ಟ ಬಾಲಕಿ, ಇದೀಗ ತನ್ನ ತಂದೆ, ಮಲತಾಯಿ ಹಾಗೂ ಅತ್ತೆ ವಿರುದ್ಧ ದೂರು ನೀಡಿದ್ದಾಳೆ.
2010ರಲ್ಲಿ ಬಾಲಕಿಯನ್ನು ರಾಜಸ್ಥಾನದ ಭರತ್ಪುರದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲಾಗಿತ್ತು. ಆಕೆಯ ನಾಲ್ಕು ಹಾಗೂ ಆರು ವರ್ಷದ ಸಹೋದರಿಯರನ್ನೂ ಇದೇ ರೀತಿ ರಾಜಸ್ಥಾನದ ಮಂದಿಗೆ ಮಾರಾಟ ಮಾಡಲಾಗಿತ್ತು ಎಂದು ಎಫ್ಐಆರ್ನಲ್ಲಿ ಆಪಾದಿಸಲಾಗಿದೆ. ಎಂಟು ವರ್ಷ ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟು, ದೊಡ್ಡವಳ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಲಾಗಿದೆ. ಪರಿಣಾಮವಾಗಿ ಈಕೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದೀಗ ಭರತ್ಪುರದಲ್ಲಿ ತನ್ನನ್ನು ಬಂಧನದಲ್ಲಿಟ್ಟಿದ್ದ ಮನೆಯಿಂದ ತಪ್ಪಿಸಿಕೊಂಡು ಸಂಭಾಲ್ನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.
ತಂದೆ, ಮಲತಾಯಿ, ಅತ್ತೆ ಹಾಗೂ ಖರೀದಿ ಮಾಡಿದ ವ್ಯಕ್ತಿಯನ್ನು ಎಫ್ಐಆರ್ನಲ್ಲಿ ಹೆಸರಿಸಲಾಗಿದ್ದು, ಇವರ ಬಂಧನಕ್ಕೆ ಪ್ರಯತ್ನ ನಡೆದಿದೆ ಎಂದು ನಖಾಸಾ ಠಾಣೆ ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಈ ಬಾಲಕಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವಳು.