ಶಿಕ್ಷಣಾಧಿಕಾರಿಯೊಡನೆ ಉ.ಪ್ರ.ಬಿಜೆಪಿ ಶಾಸಕನ ಅನುಚಿತ ವರ್ತನೆ, ವೀಡಿಯೊ ವೈರಲ್
ಬಲಿಯಾ,ಸೆ.23: ಶನಿವಾರ ಇಲ್ಲಿ ನಡೆದಿದ್ದ ಅಧಿಕೃತ ಸಭೆಯೊಂದರಲ್ಲಿ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಮತ್ತವರ ಕೆಲವು ಬೆಂಬಲಿಗರು ಜಿಲ್ಲಾ ಶಾಲಾ ನಿರೀಕ್ಷಣಾಧಿಕಾರಿ ನರೇಂದ್ರ ದೇವ ಪಾಂಡೆ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಿಟ್ಟಿಗೆದ್ದ ಸಿಂಗ್ ಪಾಂಡೆಯವರತ್ತ ಧಾವಿಸುತ್ತಿರುವ ಮತ್ತು ಬಿಜೆಪಿ ನಾಯಕನೋರ್ವ ಅವರನ್ನು ತಳ್ಳುತ್ತಿರುವ ದೃಶ್ಯ ವೀಡಿಯೊದಲ್ಲಿ ದಾಖಲಾಗಿದೆ. ಆದರೆ ಜಿಲ್ಲಾಧಿಕಾರಿ ಭಂವರಸಿಂಗ್ ಖರ್ಗೌತ್ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು.
ತನಗೆ ಯಾರದೇ ಹೆದರಿಕೆಯಿಲ್ಲ ಎಂದು ಪಾಂಡೆ ಹೇಳಿದ್ದು ಶಾಸಕರು ಮತ್ತು ಇತರರನ್ನು ಕೆರಳಿಸಿತ್ತು ಎಂದು ಖರ್ಗೌತ್ ತಿಳಿಸಿದರು. ಆದರೆ ಬಳಿಕ ಸಿಂಗ್ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
Next Story