20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮಕ್ಕಳ್ ನೀದಿ ಮೈಯಂ ಸಿದ್ಧ: ಕಮಲ್ ಹಾಸನ್
ತಮಿಳುನಾಡು ಉಪಚುನಾವಣೆ
ಚೆನ್ನೈ, ನ. 8: ತಮಿಳುನಾಡು ವಿಧಾನ ಸಭೆಯ ಉಪ ಚುನಾವಣೆಯ 20 ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ನಟ ಹಾಗೂ ಮಕ್ಕಳ್ ನೀದಿ ಮೈಯಂನ ಅಧ್ಯಕ್ಷ ಕಮಲ್ ಹಾಸನ್ ಬುಧವಾರ ಹೇಳಿದ್ದಾರೆ.
ಈ ಎಲ್ಲ 20 ವಿಧಾನ ಸಭಾ ಕ್ಷೇತ್ರಗಳಲ್ಲಿ ತನ್ನ ಪಕ್ಷದ ಶೇ. 80 ಕಾರ್ಯಕರ್ತರನ್ನು ಈಗಾಗಲೇ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಉಪಚುನಾವಣೆ ಯಾವಾಗ ನಡೆಯುತ್ತದೆ ಎಂಬ ಬಗ್ಗೆ ಯಾರೊಬ್ಬರಿಗೂ ಖಾತರಿ ಇಲ್ಲ. ಆದಾಗ್ಯೂ, ಸ್ಪರ್ಧಿಸಲು ನಾವು ಸಿದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ. ತನ್ನ 64ನೇ ಹುಟ್ಟು ಹಬ್ಬದ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಜನರ ಸಾಧನ ಹಾಗೂ ಯಾವುದೇ ಗುಂಪಿನ ಅಥವಾ ಪಕ್ಷದ ಸಾಧನವಲ್ಲ ಎಂದರು. ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಾದರೆ, ಪ್ರತಿ ರಾಜ್ಯ ಸರಕಾರದ ಇಲಾಖೆಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು. ಶ್ರೀಲಂಕಾದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನಮ್ಮ ದೇಶದಲ್ಲೇ ಅನೇಕ ಸಮಸ್ಯೆಗಳಿವೆ. ಈ ಸಂದರ್ಭ ಇನ್ನೊಂದು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಹೇಳಿಕೆ ನೀಡುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದರು.
ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಹಾಗೂ ತಮಿಳು ನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಮಲ್ ಹಾಸನ್ ಅವರನ್ನು ಭೇಟಿಯಾಗಿ ಜನ್ಮ ದಿನಾಚರಣೆಗೆ ಶುಭ ಕೋರಿದರು.