ಸಿಪಿಎಂ ಕಚೇರಿ ಒಳಗಡೆ ಅತ್ಯಾಚಾರ: ಯುವತಿಯ ಆರೋಪ
ಪಾಲಕ್ಕಾಡ್, ಮಾ. 21: ಕೇರಳದ ಆಡಳಿತಾರೂಡ ಸಿಪಿಎಂ ಪ್ರದೇಶ ಸಮಿತಿ ಕಚೇರಿಯ ಒಳಗಡೆ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ 21ರ ಹರೆಯದ ಯುವತಿಯೋರ್ವಳು ಪೊಲೀಸ್ ದೂರು ದಾಖಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ಶನಿವಾರ ರಸ್ತೆ ಬದಿಯಲ್ಲಿ ಉಪೇಕ್ಷಿಸಲಾದ ನವಜಾತ ಹೆಣ್ಣು ಶಿಶು ಪತ್ತೆಯಾದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದರು ಹಾಗೂ ಮಗುವಿನ ತಾಯಿಯನ್ನು ಪತ್ತೆಹಚ್ಚಿದ್ದರು. ಈ ಸಂದರ್ಭ ಆಕೆ, 10 ತಿಂಗಳ ಹಿಂದೆ ಪಕ್ಷದ ಕಚೇರಿಯ ಒಳಗಡೆ ವಿದ್ಯಾರ್ಥಿ ಕಾರ್ಯಕರ್ತನೋರ್ವ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕಾಲೇಜು ಮ್ಯಾಗಝಿನ್ ಸಿದ್ಧಪಡಿಸಲು ಪಕ್ಷದ ಕಚೇರಿಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ಯುವತಿ ತನ್ನ ದೂರಿನಲ್ಲಿ ಪ್ರತಿಪಾದಿಸಿದಾರೆ. ಯುವತಿ ಎಸ್ಎಫ್ಐ ಕಾರ್ಯಕರ್ತೆ. ಅವರ ಕುಟುಂಬ ಕೂಡ ಪಕ್ಷದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಕಚೇರಿಯ ಒಳಗಡೆ ಈ ಘಟನೆ ನಡೆದಿದ್ದರೆ, ಪಕ್ಷ ಈ ಬಗ್ಗೆ ತನಿಖೆ ನಡೆಸಲಿದೆ. ಪೊಲೀಸರು ಕೂಡ ಪ್ರಾಮಾಣಿಕವಾಗಿ ಹಾಗೂ ವೈಜ್ಞಾನಿಕವಾಗಿ ತನಿಖೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ, ಆರೋಪಿಯ ಹೇಳಿಕೆಯನ್ನು ಪೊಲೀಸರು ಇನ್ನಷ್ಟೆ ದಾಖಲಿಸಿಕೊಳ್ಳಬೇಕಿದೆ. ಮಹಿಳೆ ಹಾಗೂ ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ನ ರಮೇಶ್ ಚೆನ್ನಿತ್ತಲ, ಸಿಪಿಎಂನ ಕಚೇರಿ ಅತ್ಯಾಚಾರದ ಕೇಂದ್ರವಾಗುತ್ತಿರುವುದು ದುರಾದೃಷ್ಟಕರ. ನನಗೆ ಇದನ್ನು ಹೇಳಲು ವಿಷಾದವಾಗುತ್ತಿದೆ. ಆದರೆ, ಇದು ವಾಸ್ತವ ಎಂದಿದ್ದಾರೆ.