ಆಕಸ್ಮಿಕವಾಗಿ ಡೀಸೆಲ್ ಕುಡಿದ ಒಂದೂವರೆ ವರ್ಷದ ಮಗು ಮೃತ್ಯು
ಪುಣೆ, ಮೇ 26: ಆಕಸ್ಮಿಕವಾಗಿ ಡೀಸೆಲ್ ಕುಡಿದ ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಪುಣೆಯ ದೆಹು ಗಾಂವ್ ಎಂಬಲ್ಲಿ ನಡೆದಿದೆ.
ದಿನಗೂಲಿ ಕಾರ್ಮಿಕ ದಂಪತಿಯ ಒಂದೂವರೆ ವರ್ಷದ ಮಗು ವೇದಾಂತ್ ಗಾಯಕ್ವಾಡ್ ಮೃತಪಟ್ಟಿದೆ. ಮಗುವಿನ ಈತನ ತಾಯಿ ಸ್ಟೌಗೆ ತುಂಬಿಸಲೆಂದು ಲೋಟದಲ್ಲಿ ಡೀಸೆಲ್ ತುಂಬಿಸಿಟ್ಟಿದ್ದರು. ನೀರೆಂದು ಭಾವಿಸಿ ಮಗು ಇದನ್ನು ಕುಡಿದಿದೆ. ಆದರೆ ತಾಯಿಗೆ ಇದು ತಿಳಿದಿರಲಿಲ್ಲ. ಕೆಲ ಕ್ಷಣದ ಬಳಿಕ ಮಗು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದು ಕಣ್ಣು ಬಿಳಿಬಣ್ಣಕ್ಕೆ ತಿರುಗಿದಾಗ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಟೌಗೆ ಸೀಮೆ ಎಣ್ಣೆ ಅಲಭ್ಯವಾಗಿರುವ ಕಾರಣ ಮಹಿಳೆ ಡೀಸೆಲ್ ತಂದಿದ್ದರು. ಪತಿ ದುಡಿಮೆಗಾಗಿ ಹೊರ ಹೋಗಿದ್ದಾಗ ಸ್ಟೌಗೆ ತುಂಬಿಸಲು ಲೋಟದಲ್ಲಿ ಡೀಸೆಲ್ ಇಟ್ಟಿದ್ದನ್ನು ಮಗು ಕುಡಿದಿದೆ. ತಕ್ಷಣ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಿದರೂ ಮಗು ಮೃತಪಟ್ಟಿದೆ. ಪರಿಶಿಷ್ಟ ಜಾತಿಗೆ ಸೇರಿದ ಈ ಕುಟುಂಬ ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.