ಅತ್ಯಾಚಾರ ಆರೋಪ: ಡಿಎನ್ಎ ಪರೀಕ್ಷೆಗೆ ಬಿನೋಯ್ ಕೊಡಿಯೇರಿ ಸಮ್ಮತಿ
ತಿರುವನಂತಪುರ, ಜು. 8: ತನ್ನ ವಿರುದ್ಧದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಡಿಎನ್ಎ ಪರೀಕ್ಷೆಗೆ ಒಳಗಾಗಲು ಸಿಪಿಎಂನ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೋಯ್ ಕೊಡಿಯೇರಿ ಸಮ್ಮತಿ ಸೂಚಿಸಿದ್ದಾರೆ.
ರಕ್ತದ ಮಾದರಿ ನೀಡಲು ತಾನು ಸಿದ್ಧ ಎಂದು ಬಿನೋಯ್ ಸೋಮವಾರ ಮುಂಬೈಯ ಒಶಿವಾರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮುಂಬೈ ನ್ಯಾಯಾಲಯ ಬಿನೋಯ್ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು ಹಾಗೂ ಪೊಲೀಸರು ಸೂಚಿಸಿದರೆ, ಡಿಎನ್ಎ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿತ್ತು. ಎಲ್ಲ ಸೋಮವಾರ ಒಶಿವಾರ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಕೂಡ ನ್ಯಾಯಾಲಯ ನಿರ್ದೇಶಿಸಿತ್ತು. ಮಹಿಳೆಯೋರ್ವರು ದಾಖಲಿಸಿದ ಪೊಲೀಸ್ ದೂರಿನಲ್ಲಿ ಬಿನೋಯ್ ಮೇಲೆ ಅತ್ಯಾಚಾರ ಹಾಗೂ ವಂಚನೆಯ ಆರೋಪ ಹೊರಿಸಲಾಗಿದೆ.
ವಿವಾಹವಾಗುವುದಾಗಿ ನಂಬಿಸಿ ಬಿನೋಯ್ ಅತ್ಯಾಚಾರ ಎಸಗಿದ್ದಾರೆ ಎಂದು 33 ಹರೆಯದ ಮಾಜಿ ಬಾರ್ ಡ್ಯಾನ್ಸರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು. ಬಿನೋಯ್ ಸಂಬಂಧದಿಂದ ನಮಗೆ 8 ವರ್ಷದ ಪುತ್ರನಿದ್ದಾನೆ ಎಂದು ಮಹಿಳೆ ನ್ಯಾಯಾಲಯದಲ್ಲಿ ಹೇಳಿದ್ದಾಳೆ. ಬಿನೋಯ್ಯನ್ನು ಪೊಲೀಸರು ಸೋಮವಾರ ವಿಚಾರಣೆ ನಡೆಸಿದರು.