ನ.18ರಿಂದ ಡಿ.13: ಸಂಸತ್ತಿನ ಚಳಿಗಾಲದ ಅಧಿವೇಶನ
ಹೊಸದಿಲ್ಲಿ,ಅ.21: ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನ.18ರಿಂದ ಡಿ.13ರವರೆಗೆ ನಡೆಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯವು ಸೋಮವಾರ ಪ್ರಕಟಿಸಿದೆ. ಸಚಿವಾಲಯವು ಈ ನಿರ್ಧಾರವನ್ನು ಸಂಸತ್ತಿನ ಉಭಯ ಸದನಗಳ ಕಾರ್ಯದರ್ಶಿಗಳಿಗೆ ತಿಳಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಬಳಿಕ ಇದು ಸಂಸತ್ತಿನ ಮೊದಲ ಅಧಿವೇಶನವಾಗಿದೆ. ಇತರ ವಿಷಯಗಳ ಜೊತೆಗೆ ಕಾಶ್ಮೀರ ಕಣಿವೆಯಲ್ಲಿ ಸಂವಹನ ನಿರ್ಬಂಧ ಮತ್ತು ಆರ್ಥಿಕ ಹಿಂಜರಿತವನ್ನು ಪ್ರತಿಪಕ್ಷವು ಪ್ರಸ್ತಾಪಿಸುವ ಸಾಧ್ಯತೆಯಿದೆ.
ಸರಕಾರವು ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ನಿರೀಕ್ಷೆಯಿದೆ. ಹಿಂದಿನ ಲೋಕಸಭೆಯು ಮಸೂದೆಯನ್ನು ಅಂಗೀಕರಿಸಿತ್ತಾದರೂ ರಾಜ್ಯಸಭೆಯಲ್ಲಿ ಅದನ್ನು ಮಂಡಿಸಿರಲಿಲ್ಲ. ಮೇ ತಿಂಗಳಿನಲ್ಲಿ ಲೋಕಸಭೆಯ ಅಧಿಕಾರಾವಧಿ ಮುಗಿಯುವುದರೊಡನೆ ಮಸೂದೆಯೂ ಅಸ್ತಿತ್ವವನ್ನು ಕಳೆದುಕೊಂಡಿತ್ತು.
ಅಧಿವೇಶನದಲ್ಲಿ ಇತರ ಹಲವಾರು ಮಸೂದೆಗಳನ್ನೂ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಕಾನೂನಾಗಿ ಪರಿವರ್ತನೆಗೊಳ್ಳಬೇಕಾದ ಎರಡು ಪ್ರಮುಖ ಅಧ್ಯಾದೇಶಗಳೂ ಪಟ್ಟಿಯಲ್ಲಿವೆ.
ಕಳೆದ ವರ್ಷ ಚಳಿಗಾಲದ ಅಧಿವೇಶನವು ಡಿ.11ರಿಂದ ಜ.8ರವರೆಗೆ ನಡೆದಿತ್ತು.