ಪೆಗಾಸಸ್ ಸ್ಪೈವೇರ್: ಕೇಂದ್ರ ಸರಕಾರದ ಸ್ಪಷ್ಟನೆಗೆ ಕಪಿಲ್ ಸಿಬಲ್ ಆಗ್ರಹ
ಹೊಸದಿಲ್ಲಿ, ನ.2: ಇಸ್ರೇಲ್ನ ಸ್ಪೈವೇರ್ ಪೆಗಾಸಸ್ ಕುರಿತ ವಿವಾದದ ಬಗ್ಗೆ ಕೇಂದ್ರ ಸರಕಾರ ತಕ್ಷಣ ಉತ್ತರ ನೀಡಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಆಗ್ರಹಿಸಿದ್ದಾರೆ.
ಇಸ್ರೇಲ್ ಸ್ಪೈವೇರ್ ಅನ್ನು ಸರಕಾರದ ಯಾವ ಇಲಾಖೆ ಬಳಸಿಕೊಂಡಿದೆ ಮತ್ತು ಬೇಹುಗಾರಿಕೆ ನಡೆಸಲು ಆ ಇಲಾಖೆಗೆ ಯಾರು ಸೂಚನೆ ನೀಡಿದ್ದಾರೆ ಎಂಬ ಬಗ್ಗೆ ಸರಕಾರ ಮಾಹಿತಿ ಒದಗಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ನ ಎನ್ಎಸ್ಒ ಸಂಸ್ಥೆ ಪೆಗಾಸಸ್ ಅನ್ನು ಕೇವಲ ಸರಕಾರಕ್ಕೆ ಮಾತ್ರ ಮಾರಾಟ ಮಾಡುತ್ತದೆ. ಇಸ್ರೇಲ್ ಸ್ಪೈವೇರ್ನ ಬಗ್ಗೆ ವಾಟ್ಸಾಪ್ ಉತ್ತರಿಸುವ ಮೊದಲು ಕೇಂದ್ರ ಸರಕಾರ ಉತ್ತರಿಸಬೇಕಿದೆ. ಪೆಗಾಸಸ್ ಅನ್ನು ಸರಕಾರದ ಯಾವ ಇಲಾಖೆ ಖರೀದಿಸಿದೆ, ಎಷ್ಟು ಹಣ ನೀಡಿದೆ, ಅದರ ಕಾರ್ಯವನ್ನು ಯಾರು ನಿರ್ವಹಿಸಿದ್ದರು, ಬೇಹುಗಾರಿಕೆ ನಡೆಸಲು ಯಾರು ಸೂಚನೆ ನೀಡಿದರು, ಇತರ ಯಾವ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಪ್ರಶ್ನೆಗೆ ಕೇಂದ್ರ ಸರಕಾರ ಉತ್ತರಿಸಬೇಕು ಎಂದು ಸಿಬಲ್ ಆಗ್ರಹಿಸಿದ್ದಾರೆ.
Next Story