ಹೊಟೇಲ್ ನಲ್ಲಿ ಇಬ್ಬರು ಪೊಲೀಸರಿಂದ ಮಹಿಳೆ ಮೇಲೆ ಅತ್ಯಾಚಾರ: ಪ್ರಕರಣ ದಾಖಲು
ಗೋರಖ್ಪುರ, ಫೆ.16: ಉತ್ತರಪ್ರದೇಶದ ಗೋರಖ್ಪುರದ ರೈಲ್ವೇ ನಿಲ್ದಾಣ ಸಮೀಪವಿರುವ ಹೊಟೇಲ್ ರೂಮ್ನೊಳಗೆ ಇಬ್ಬರು ಪೊಲೀಸರು 20ರ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ. ಈ ಘಟನೆಯು ಗುರುವಾರ ನಡೆದಿದೆ.
ಮಹಿಳೆಯು ಘಟನೆಯ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸಿದ್ದು, ಈ ಬಗ್ಗೆ ಶುಕ್ರವಾರ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋರಖ್ಪುರ ಪೊಲೀಸ್ ಠಾಣೆಯಲ್ಲಿ ಗುರುತು ಬಹಿರಂಗಪಡಿಸದ ಇಬ್ಬರು ಪೊಲೀಸರ ವಿರುದ್ಧ ಗ್ಯಾಂಗ್ರೇಪ್ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಈ ತನಕ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗೋರಖ್ಪುರ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಯನ್ನು ಅಮಾನತುಗೊಳಿಸಿ, ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್ಪಿ ಹಾಗೂ ಪೂರ್ವಾಂಚಲ ಸೇನಾ ಸಹಿತ ವಿವಿಧ ರಾಜಕೀಯ ಪಕ್ಷಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಎದುರು ಧರಣಿ ನಡೆಸುತ್ತಿದ್ದಾರೆ.
‘‘ಅತ್ಯಾಚಾರಕ್ಕೆ ಒಳಗಾಗಿರುವ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಪೊಲೀಸರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆೆ. ತನಿಖೆಯ ವೇಳೆ ನಾವು ಹೊಟೇಲ್ನ ಸಿಸಿಟಿವಿ ದೃಶ್ಯವನ್ನು ವಶಪಡಿಸಿಕೊಂಡಿದ್ದು, ಭದ್ರತಾ ಸಿಬ್ಬಂದಿಯ ಹೇಳಿಕೆ ಪಡೆದಿದ್ದೇವೆ’’ ಎಂದು ಗೋರಖ್ಪುರ ಎಸ್ಎಸ್ಪಿ ಸುನೀಲ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಇಬ್ಬರು ಪೊಲೀಸರು ನನಗೆ ಚೆನ್ನಾಗಿ ಥಳಿಸಿದರು. ತಾನು ವೇಶ್ಯಾವಾಟಿಕೆಯನ್ನು ತೊಡಗಿದ್ದಾಗಿ ಆರೋಪಿಸಿದರು. ತನ್ನನ್ನು ಬಿಟ್ಟುಬಿಡಿ ಎಂದು ವಿನಂತಿಸಿದೆ. ಆದರೆ ಅವರು ನನಗೆ ಹಲ್ಲೆ ನಡೆಸಿದ್ದಲ್ಲದೆ, ಅತ್ಯಾಚಾರ ಎಸಗಿದ್ದಾರೆ. ಆಟೋರಿಕ್ಷಾದಲ್ಲಿ ಮನೆಗೆ ಹೋಗು ಎಂದು ಹೇಳಿದ್ದಾರೆ ಎಂದು ಅತ್ಯಾಚಾರ ಸಂತ್ರಸ್ತ ಮಹಿಳೆ ಹೇಳಿದ್ದಾರೆ.