ಸಂಸ್ಕೃತ ಉತ್ತೇಜನಕ್ಕೆ 643.84 ಕೋ.ರೂ.ವ್ಯಯಿಸಿದ ಕೇಂದ್ರ
ಇದು ಇತರ 5 ಭಾಷೆಗಳ ವೆಚ್ಚದ 22 ಪಟ್ಟು!
ಹೊಸದಿಲ್ಲಿ,ಫೆ.17: ಕೇಂದ್ರ ಸರಕಾರವು ಕಳೆದ ಮೂರು ವರ್ಷಗಳಲ್ಲಿ ಸಂಸ್ಕೃತ ಭಾಷೆಯನ್ನು ಉತ್ತೇಜಿಸಲು 643.84 ಕೋ.ರೂ.ಗಳಷ್ಟು ಭಾರೀ ಮೊತ್ತವನ್ನು ವ್ಯಯಿಸಿದೆ. ಇದು ಇತರ ಐದು ಶಾಸ್ತ್ರೀಯ ಭಾಷೆಗಳಾದ ಕನ್ನಡ,ತಮಿಳು,ತೆಲುಗು,ಮಲಯಾಳಂ ಮತ್ತು ಒಡಿಯಾ ಭಾಷೆಗಳಿಗಾಗಿ ಅದು ವೆಚ್ಚ ಮಾಡಿರುವ ಒಟ್ಟು ಮೊತ್ತ 29 ಕೋ.ರೂ.ಗಳಿಗೆ ಹೋಲಿಸಿದರೆ 22 ಪಟ್ಟುಗಳಷ್ಟಾಗಿದೆ.
ಇದೇ ವೇಳೆ ಸರಕಾರವು ಮಲಯಾಳಂ ಮತ್ತು ಒಡಿಯಾ ಭಾಷೆಗಳಿಗಾಗಿ ಪ್ರತ್ಯೇಕ ನಿಧಿಗಳನ್ನು ಸೃಷ್ಟಿಸಿಲ್ಲ ಮತ್ತು ಇತರ ಶಾಸ್ತ್ರೀಯ ಭಾರತೀಯ ಭಾಷೆಗಳನ್ನು ಉತ್ತೇಜಿಸಲು ಯಾವುದೇ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯವು ಬಿಡುಗಡೆಗೊಳಿಸಿರುವ ಅಂಕಿಅಂಶಗಳು ಬಯಲುಗೊಳಿಸಿವೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್ಆರ್ಡಿ)ವು ಸಂಸ್ಕೃತದ ಉತ್ತೇಜನಕ್ಕೆ ನೋಡಲ್ ಪ್ರಾಧಿಕಾರವಾಗಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನವನ್ನು ಸ್ಥಾಪಿಸಿದ್ದು,2017-18ರಿಂದ 2019-20ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ ಅದಕ್ಕೆ ಒಟ್ಟು 643.84 ಕೋ.ರೂ.ಗಳನ್ನು ಒದಗಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಎಂಎಚ್ಆರ್ಡಿ ಅಧೀನದಲ್ಲಿರುವ ‘ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್ ’ಮೂಲಕ ತಮಿಳು ಭಾಷೆಗಾಗಿ ಕೇಂದ್ರವು ಕಳೆದ ಮೂರು ವರ್ಷಗಳಲ್ಲಿ 22.94 ಕೋ.ರೂ.ಗಳನ್ನು ವ್ಯಯಿಸಿದ್ದರೆ ಇದೇ ಅವಧಿಯಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಿಗಾಗಿ ತಲಾ ಕೇವಲ 3.06 ಕೋ.ರೂ.ಗಳನ್ನು ವೆಚ್ಚ ಮಾಡಿದೆ.
ತೆಲುಗು ಮತ್ತು ಕನ್ನಡ ಭಾಷೆಗಳಿಗಾಗಿ 2011ರಲ್ಲಿ ಮೈಸೂರಿನಲ್ಲಿ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯಲ್ಲಿ ಉನ್ನತ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ನಂತರ ತೆಲುಗು ಕೇಂದ್ರವು ಆಂಧ್ರಪ್ರದೇಶದ ನೆಲ್ಲೂರಿಗೆ ವರ್ಗಾವಣೆಗೊಂಡಿದೆ.