ಭವಿಷ್ಯ ನಿಧಿ ಪಿಂಚಣಿದಾರರಿಗೆ ಸಿಹಿ ಸುದ್ದಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯ ನಿಧಿ ಪಿಂಚಣಿದಾರರಿಗೆ ಸಿಹಿ ಸುದ್ದಿಯಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಪಿಂಚಣಿ ಮೊತ್ತವಾಗಿ ರೂ. 868 ಕೋಟಿ ಬಿಡುಗಡೆಗೊಳಿಸಿದೆ. ಜತೆಗೆ ಪಿಂಚಣಿಯ ಕಮ್ಯುಟೆಡ್ ಮೌಲ್ಯದ ಮರುಸ್ಥಾಪನೆಯಿಂದಾಗಿ ಬಾಕಿಯಿರುವ ರೂ. 105 ಕೋಟಿ ಮೊತ್ತವನ್ನೂ ಬಿಡುಗಡೆಗೊಳಿಸಲಾಗಿದೆ. ಇಪಿಎಫ್ಒದ ಕೇಂದ್ರ ಟ್ರಸ್ಟಿಗಳ ಮಂಡಳಿಯ ಶಿಫಾರಸಿನ ಮೇರೆಗೆ ಸರಕಾರ ಉದ್ಯೋಗಿಗಳ ಒಂದು ಬಹುಕಾಲದ ಬೇಡಿಕೆಯನ್ನು ಈಡೇರಿಸಿದೆ ಹಾಗೂ ಪಿಂಚಣಿಯ ಕಮ್ಯುಟೆಡ್ ಮೌಲ್ಯವನ್ನು 15 ವರ್ಷಗಳ ಬಳಿಕ ಮರುಸ್ಥಾಪಿಸಿದೆ. ಸರಕಾರದ ಈ ಕ್ರಮ 65 ಲಕ್ಷ ಭವಿಷ್ಯ ನಿಧಿ ಪಿಂಚಣಿದಾರರಿಗೆ ವರದಾನವಾಗಲಿದೆ.
ಇಂತಹ ಒಂದು ಕ್ರಮವನ್ನು ಕೈಗೊಳ್ಳುವ ಕುರಿತಂತೆ ಸರಕಾರ ಫೆಬ್ರವರಿ ತಿಂಗಳಿನಲ್ಲಿಯೇ ಮಾಹಿತಿ ನೀಡಿತ್ತು. ಪಿಂಚಣಿದಾರರಿಗೆ ತಮ್ಮ ಮಾಸಿಕ ಪಿಂಚಣಿಯ ಒಂದು ಭಾಗವನ್ನು ನಿವೃತ್ತಿ ಸಮಯದಲ್ಲಿ ಪರಿವರ್ತಿಸಿ ನಿವೃತ್ತಿ ಸಮಯದಲ್ಲಿ ದೊಡ್ಡ ಮೊತ್ತವನ್ನು ಪಡೆಯುವ ಆಯ್ಕೆ ಕಮ್ಯುಟೇಶನ್ ಆಗಿದೆ.
ನಿಯಮಗಳ ಪ್ರಕಾರ ಸೆಪ್ಟೆಂಬರ್ 26, 2008ಗಿಂತ ಮುಂಚಿತವಾಗಿ ನಿವೃತ್ತನಾದ ಸದಸ್ಯನೊಬ್ಬ ತನ್ನ ಪಿಂಚಣಿಯ ಗರಿಷ್ಠ ಮೂರನೇ ಒಂದು ಭಾಗವನ್ನು ದೊಡ್ಡ ಮೊತ್ತವಾಗಿ ಪಡೆದರೆ ಉಳಿದ ಭಾಗವನ್ನು ಜೀವಿತ ಕಾಲದಲ್ಲಿ ಮಾಸಿಕ ಪಿಂಚಣಿ ರೂಪದಲ್ಲಿ ಪಡೆಯುತ್ತಾರೆ.
ಆದರೆ ಕಳೆದ ವರ್ಷದ ಆಗಸ್ಟ್ 21ರಂದು ಟ್ರಸ್ಟಿಗಳ ಮಂಡಳಿಯ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಸೆಪ್ಟೆಂಬರ್ 26, 2008ಗಿಂತ ಮುಂಚಿತವಾಗಿ ನಿವೃತ್ತರಾದವರಿಗೆ ಹಾಗೂ 15 ವರ್ಷಗಳ ನಂತರ ಪಿಂಚಣಿ ಕಮ್ಯುಟೇಶನ್ ಆಯ್ದುಕೊಂಡವರಿಗೆ ಪೂರ್ಣ ಮಾಸಿಕ ಪಿಂಚಣಿಯನ್ನು ನೀಡಲು ಅನುಮೋದನೆ ನೀಡಲಾಗಿತ್ತು.