ಭಾರತದಲ್ಲಿ ಆಗಸ್ಟ್ನಲ್ಲೇ 15 ಲಕ್ಷ ದಾಟಿದ ಕೊರೋನ ಸೋಂಕು ಪ್ರಕರಣ
ಹೊಸದಿಲ್ಲಿ: ಆಗಸ್ಟ್ ತಿಂಗಳ ಮೊದಲ 25 ದಿನಗಳಲ್ಲಿ ದೇಶದ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 15 ಲಕ್ಷ ದಾಟಿದೆ. ಅಂತೆಯೇ ಮಂಗಳವಾರ ಎರಡನೇ ಗರಿಷ್ಠ ಅಂದರೆ 1071 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಎರಡು ದಿನಗಳ ಇಳಿಕೆ ಪ್ರವೃತ್ತಿ ಬಳಿಕ ಮಂಗಳವಾರ 66 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 32 ಲಕ್ಷ ದಾಟಿರುವುದು ರಾಜ್ಯ ಸರ್ಕಾರಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಸೋಮವಾರ ಭಾರಿ ಪ್ರಮಾಣದಲ್ಲಿ ಇಳಿಕೆಯ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆ 1000ದಷ್ಟು ಹೆಚ್ಚಿ ಏಳು ಲಕ್ಷ ತಲುಪಿದೆ.
ಆಗಸ್ಟ್ನಲ್ಲಿ ಇದುವರೆಗೆ 15.3 ಲಕ್ಷ ಪ್ರಕರಣಗಳು ದೃಢಪಟ್ಟಿವೆ. ಅಮೆರಿಕದಲ್ಲಿ ಜುಲೈನಲ್ಲಿ 20 ಲಕ್ಷ ಪ್ರಕರಣ ವರದಿಯಾದ ಬಳಿಕ ವಿಶ್ವದ ಯಾವುದೇ ದೇಶದಲ್ಲಿ ಒಂದೇ ತಿಂಗಳಲ್ಲಿ ಇಷ್ಟು ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು. ಆಗಸ್ಟ್ ತಿಂಗಳಲ್ಲಿ ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ.
ದೇಶಾದ್ಯಂತ ಮಂಗಳವಾರ ಒಟ್ಟು 1071 ಮಂದಿ ಸೋಂಕಿತರು ಮೃತಪಟ್ಟಿದ್ದು, 28 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ಸಾವು ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ (329) ಮಂದಿ ಅಸುನೀಗಿದ್ದರೆ, ಕರ್ನಾಟಕ (148), ತಮಿಳುನಾಡು (107), ಆಂಧ್ರಪ್ರದೇಶ (92), ಉತ್ತರ ಪ್ರದೇಶ (72), ಬಂಗಾಳ (58) ಮತ್ತು ಪಂಜಾಬ್ (49) ನಂತರದ ಸ್ಥಾನಗಳಲ್ಲಿವೆ.
ಮಹಾರಾಷ್ಟ್ರದಲ್ಲಿ ಮಂಗಳವಾರ 10,425 ಪ್ರಕರಣಗಳು ಪತ್ತೆಯಾಗಿದ್ದು, ಆಂಧ್ರಪ್ರದೇಶ (9,927), ಕರ್ನಾಟಕ (8,161) ಮತ್ತು ಉತ್ತರ ಪ್ರದೇಶ (5,124)ದಲ್ಲಿ ಕೂಡಾ ಅಧಿಕ ಪ್ರಕರಣಗಳು ದೃಢಪಟ್ಟಿವೆ. ತಮಿಳುನಾಡಿನಲ್ಲಿ 5,951, ತೆಲಂಗಾಣ (2,579), ಕೇರಳ (2,375), ರಾಜಸ್ಥಾನ (1,370), ಮಧ್ಯಪ್ರದೇಶ (1,374), ಛತ್ತೀಸ್ಗಢ (1,467) ಮತ್ತು ಪುದುಚೇರಿಯಲ್ಲಿ 571 ಪ್ರಕರಣಗಳು ವರದಿಯಾಗಿವೆ.