‘ಭೀಮ್ ಆರ್ಮಿ’ ಸೇರಿ 44 ಪೇಜ್ ಗಳನ್ನು ತೆಗೆದುಹಾಕಲು ಫೇಸ್ ಬುಕ್ ಗೆ ಹೇಳಿದ್ದ ಬಿಜೆಪಿ: ವರದಿ
ನಿಷ್ಕ್ರಿಯವಾಗಿದ್ದ 17 'ಕೇಸರಿ' ಪೇಜ್ ಗಳು ಮತ್ತೆ ಸಕ್ರಿಯ
ಹೊಸದಿಲ್ಲಿ: ನವೆಂಬರ್ 2019ರಲ್ಲಿ ‘ಒಪಿಇಂಡಿಯಾ’ದ ಅಧಿಕೃತ ಪುಟವನ್ನು ಮಾನಿಟೈಸ್ (ಪೋಸ್ಟ್ ಗಳಿಂದ ಜಾಹೀರಾತು ಆದಾಯ ಗಳಿಸುವಂತೆ ಮಾಡಲು) ಬಿಜೆಪಿಯು ಫೇಸ್ ಬುಕ್ ಅನ್ನು ಕೇಳಿಕೊಂಡಿತ್ತು ಹಾಗೂ ಇನ್ನೊಂದು ಇಂತಹುದೇ ವೆಬ್ ಸೈಟ್ `ಚೌಪಾಲ್'ಗೂ ಇದೇ ರೀತಿ ಮಾನಿಟೈಸ್ ಮಾಡುವಂತೆ ಸೂಚಿಸಿತ್ತು ಎಂದು indianexpress.com ವರದಿ ಮಾಡಿದೆ.
ಲೋಕಸಭಾ ಚುನಾವಣೆಗೆ ಎರಡು ತಿಂಗಳು ಮುನ್ನ, ಜನವರಿ 2019ರಲ್ಲಿ ಬಿಜೆಪಿಯು ತನ್ನ ಟೀಕಾಕಾರರು ಹಾಗೂ ರಾಜಕೀಯ ಎದುರಾಳಿಗಳಿಗೆ ಸಂಬಂಧಿಸಿದ 44 ಪೇಜ್ ಗಳನ್ನು ತೆಗೆದು ಹಾಕುವಂತೆಯೂ ಫೇಸ್ ಬುಕ್ ಗೆ ಸೂಚಿಸಿತ್ತು ಹಾಗೂ ಈ ಫೇಸ್ ಬುಕ್ ಪುಟಗಳಲ್ಲಿ ‘ಭೀಮ್ ಆರ್ಮಿ’, ‘ವಿ ಹೇಟ್ ಬಿಜೆಪಿ’, ಹಾಗೂ ‘ಆಲ್ಟ್ ನ್ಯೂಸ್’ ಸ್ಥಾಪಕ ಪ್ರತೀಕ್ ಸಿನ್ಹಾ ಅವರ ದಿ ಟ್ರುತ್ ಆಫ್ ಗುಜರಾತ್ ಪುಟಗಳೂ ಸೇರಿದ್ದವು.
ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಹಾಗೂ ಫೇಸ್ ಬುಕ್ ಇಂಡಿಯಾದ ಪಬ್ಲಿಕ್ ಪಾಲಿಸಿ ಎಕ್ಸಿಕ್ಯೂಟಿವ್ಸ್ ಆಗಿರುವ ಅಂಖಿ ದಾಸ್ ಮತ್ತು ಶಿವನಾಥ್ ತುಕ್ರಾಲ್ ನಡುವಿನ ಇಮೇಲ್ ಮಾತುಕತೆಗಳನ್ನು ಆಧಾರವಾಗಿಸಿ ಮೇಲಿನ ಮಾಹಿತಿಯಿರುವ ಇಂಡಿಯನ್ ಎಕ್ಸ್ ಪ್ರೆಸ್ ಈ ವರದಿ ಪ್ರಕಟಿಸಿದೆ..
ಈ ರೀತಿ ಬಿಜೆಪಿ ಬೊಟ್ಟು ಮಾಡಿ ತೋರಿಸಿದ 44 ಫೇಸ್ ಬುಕ್ ಪುಟಗಳಲ್ಲಿ 14 ಫೇಸ್ ಬುಕ್ ನಲ್ಲಿ ಈಗ ಇಲ್ಲ. ಇದು ಸಾಲದೆಂಬಂತೆ ಅದಾಗಲೇ ತೆಗೆದು ಹಾಕಲಾಗಿದ್ದ ‘ಹಿಂದು ರಾಷ್ಟ್ರವಾದಿ’ ಸಿದ್ಧಾಂತದ 17 ಫೇಸ್ ಬುಕ್ ಪುಟಗಳು ಆಡಳಿತ ಪಕ್ಷದ ಸೂಚನೆಯಂತೆ ಮತ್ತೆ ಆ್ಯಕ್ಟಿವ್ ಆಗಿವೆ ಎಂದು ವರದಿ ತಿಳಿಸಿದೆ.
ಈ 17 ಫೇಸ್ ಬುಕ್ ಪುಟಗಳೂ ‘ಪೋಸ್ಟ್ ಕಾರ್ಡ್’ ನ್ಯೂಸ್ ನಲ್ಲಿನ ಮಾಹಿತಿಯನ್ನೇ ಶೇರ್ ಮಾಡುತ್ತಿವೆ ಹಾಗೂ ಹೆಚ್ಚಿನವು ಕನ್ನಡದಲ್ಲಿವೆ ಹಾಗೂ ಈ ಯಾವುದೇ ಪುಟಗಳು ತಮಗೆ ಬಿಜೆಪಿ ಜತೆ ನೇರ ಸಂಬಂಧವಿದೆ ಎಂದು ಹೇಳಿಕೊಳ್ಳುವುದಿಲ್ಲ ಎಂದೂ ವರದಿ ತಿಳಿಸಿದೆ.
ಒಪಿಇಂಡಿಯಾದ ಫೇಸ್ ಬುಕ್ ಪುಟ ಮಾರ್ಚ್ ಮತ್ತು ಜೂನ್ 2019 ನಡುವೆ ರಾಜಕೀಯ ಜಾಹೀರಾತುಗಳಿಗಾಗಿ ಸುಮಾರು 90,000 ರೂ. ಖರ್ಚು ಮಾಡಿತ್ತು.
ಬಿಜೆಪಿ ಪರ ಪೇಜ್ ಗಳನ್ನು `ರಕ್ಷಿಸಲು' ಏಕೆ ಮನವಿ ಮಾಡಲಾಗಿತ್ತೆಂಬುದರ ಕುರಿತು ಪ್ರತಿಕ್ರಿಯಿಸಿದ ಅಮಿತ್ ಮಾಳವಿಯಾ ಅವುಗಳನ್ನು `ತಪ್ಪಾಗಿ ಗುರಿಯಾಗಿಸಲಾಗಿತ್ತು' ಎಂದು ಆಡಳಿತ ಅಂದುಕೊಂಡಿತ್ತು ಎಂದಿದ್ದಾರೆ.
“ಐ ಸಪೋರ್ಟ್ ನರೇಂದ್ರ ಮೋದಿ ಅಂತಹ ಹಲವು ನೈಜ ಕಾರ್ಯಕರ್ತರಿಂದ ನಡೆಸುವ ಹಲವು ಪೇಜ್ ಗಳನ್ನೂ ತೆಗೆದು ಹಾಕಬಹುದೆಂಬ ಭಯವಿತ್ತು. ನಾವು ಈ ಹಿಂದೆಯೂ ಫೇಸ್ ಬುಕ್ ಜತೆ ಸಂಪರ್ಕಿಸಿ ಸರಿಯಾದ ಕ್ರಮ ಕೈಗೊಳ್ಳುವಂತೆ ಹೇಳಿದ್ದೆವು. ಆದರೆ ಅವರು ನಮಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ನಾವು ಹೆಚ್ಚು ಪಾರದರ್ಶಕ ಮತ್ತು ನ್ಯಾಯಪರ ವ್ಯವಸ್ಥೆಗೆ ಮನವಿ ಮಾಡಿದ್ದೆವು. ಆದರೆ ಅವರು ಮಾತ್ರ ಬೇರೆಯೇ ಅಂದುಕೊಂಡಿದ್ದರು'' ಎಂದಿದ್ದಾರೆ.
“ಯಾರನ್ನೂ ರಕ್ಷಿಸುವುದು ಎಂಬುದಿಲ್ಲ. ನಾವು ಕ್ರಾಸ್-ಚೆಕ್ ಮಾಡಿ ನಮ್ಮ ನೀತಿಗಳನ್ನು ಸರಿಯಾಗಿ ಜಾರಿಗೊಳಿಸಲಾಗಿದೆಯೇ ಎಂದು ಪರಿಶೀಲಿಸುತ್ತೇವೆ. ನಮ್ಮ ನಿಯಮಗಳ ಉಲ್ಲಂಘನೆ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ'' ಎಂದು ಫೇಸ್ ಬುಕ್ ವಕ್ತಾರರು ಹೇಳಿದ್ದಾರೆ.